ಬಂಟ್ವಾಳ: ಪಾಣೆಮಂಗಳೂರು ನೂತನ ಸೇತುವೆಯ ಕೆಳಭಾಗದಲ್ಲಿ ನೇತ್ರಾವತಿ ನದಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ.
ಮೃತನನ್ನು ಗೂಡಿನ ಬಳಿ ನಿವಾಸಿ ಇರ್ಫಾನ್ (36) ಎಂದು ಗುರುತಿಸಲಾಗಿದೆ.
ಸೇತುವೆ ಕೆಳಭಾಗದಲ್ಲಿ ಇಂದು ಮುಂಜಾನೆ ಇರ್ಫಾನ್ ಶವ ಸಿಕ್ಕಿದೆ. ಬಂಟ್ವಾಳ ಪುರಸಭಾ ಪೌರ ಕಾರ್ಮಿಕರು ತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದ ಸಂದರ್ಭದಲ್ಲಿ ನೇತ್ರಾವತಿ ನದಿಯಲ್ಲಿ ಮೃತದೇಹ ಕಂಡಿದೆ.
ಶವವನ್ನು ಸ್ಥಳೀಯರು ನದಿಯಿಂದ ಮೇಲಕ್ಕೆತ್ತಿ, ಗುರುತು ಪತ್ತೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಬಳಿಕ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಇರ್ಫಾನ್ ಸೌದಿಯಲ್ಲಿ ಉದ್ಯೋಗದಲ್ಲಿದ್ದು, ಕಳೆದ ಮೂರು ವರ್ಷಗಳಿಂದ ಊರಿಗೆ ಬಂದು ಸ್ವಂತ ರಿಕ್ಷಾ ತೆಗೆದು ಕೆಲಸ ಮಾಡುತ್ತಿದ್ದರು.
ಮೃತನಿಗೆ ವಿವಾಹವಾಗಿದ್ದು ಮೂವರು ಮಕ್ಕಳಿದ್ದಾರೆ. ಕಳೆದ ಮೂರು ದಿನಗಳಿಂದ ಇರ್ಫಾನ್ ಕಾಣೆಯಾಗಿದ್ದರು. ಇದೀಗ ಅವರ ಮೃತದೇಹ ಪತ್ತೆಯಾಗಿದೆ. ಶವದ ಮೇಲೆ ಗಾಯದ ಗುರುತುಗಳಿದ್ದು, ಸಾವಿನ ಬಗ್ಗೆ ಕುಟುಂಬ ವರ್ಗ ಸಂದೇಹ ವ್ಯಕ್ತಪಡಿಸಿದೆ.
ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
























