ಪುತ್ತೂರು: ಇನ್ನೇನು ಕೆಲವೇ ದಿನಗಳಲ್ಲಿ ಬಕ್ರೀದ್ ಹಬ್ಬ ಬರಲಿದ್ದು, ಈ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಗೋವುಗಳ ಸಾಗಾಟ, ಸಾರ್ವಜನಿಕ ಸ್ಥಳಗಳಲ್ಲಿ ಗೋವುಗಳನ್ನು ಬಲಿ ಕೊಡುವುದು ಮೊದಲಾದ ಕೃತ್ಯಗಳು ನಡೆಯುವ ಸಾಧ್ಯತೆ ಇದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪುತ್ತೂರು ನಗರ ಪೊಲೀಸರಿಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಪುತ್ತೂರು ಜಿಲ್ಲೆಯ ವತಿಯಿಂದ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಜಾನುವಾರು ಸಾಗಾಟ ನಿಯಮಾವಳಿ 2021 ರ ಅನ್ವಯ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುವವರು ಮತ್ತು ವಧಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ವಿಎಚ್‌ಪಿ ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಕೋಶಾಧಿಕಾರಿ ಮಾಧವ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ. ಎಸ್., ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ ತೆಂಕಿಲ, ಜಿಲ್ಲಾ ಸತ್ಸಂಗ ಪ್ರಮುಖ್ ರವಿ ಕುಮಾರ್ ಕೈಯೂರು, ಸಹ ಸತ್ಸಂಗ ಪ್ರಮುಖ್ ರಾಜಾರಾಮ್ ಐತಾಳ್, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಮಾಣಿ, ಬಜರಂಗದಳದ ಸಹ ಸಂಯೋಜಕ ದಿನೇಶ್ ಚಾರ್ಮಾಡಿ, ಸಂತೋಷ್ ಉಪ್ಪಿನಂಗಡಿ ಮೊದಲಾದವರು ಉಪಸ್ಥಿತರಿದ್ದರು.
























