ರಾಜ್ಯಾಧ್ಯಕ್ಷರ ಆಯ್ಕೆ, ಕೋರ್ ಕಮಿಟಿ ಪುನಾರಚನೆ ಕುರಿತು ಚರ್ಚೆ
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಮೇ 23 ಮತ್ತು 24ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ನಿತಿನ್ ನವೀನ್ ಅವರ ಮೊದಲ ಅಧಿಕೃತ ಕರ್ನಾಟಕ ಭೇಟಿ ಇದಾಗಿರುತ್ತದೆ. ಅವರು ರಾಜ್ಯದ ಪ್ರಮುಖ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಿ, ಮುಂಬರುವ ಚುನಾವಣೆಗಳನ್ನು ಎದುರಿಸಲು ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಹೊಸ ‘ಟಾಸ್ಕ್’ ನೀಡಲಿದ್ದಾರೆ ಎನ್ನಲಾಗಿದೆ.
ದೇಶದಲ್ಲಿ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡು ಸರ್ಕಾರ ರಚನೆಯಾಗಿ ಆಡಳಿತವೂ ಆರಂಭವಾದ ಬೆನ್ನಲ್ಲೇ ಈಗ ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅಧ್ಯಕ್ಷರ ಆಯ್ಕೆ, ಸಂಘಟನಾತ್ಮಕ ಬದಲಾವಣೆಗಳು ಮುಂತಾದ ಕಾರ್ಯಗಳು ಆಗಬೇಕಿದ್ದು, ಈ ಹಿನ್ನೆಲೆಯಲ್ಲಿ ನಿತಿನ್ ನವೀನ್ ಭೇಟಿ ಮಹತ್ವ ಪಡೆದಿದೆ.
ಕಾಂಗ್ರೆಸ್ ಆಡಳಿತಕ್ಕೆ ಕೌಂಟರ್ ಕೊಡಲು ಮತ್ತು ಮುಂಬರುವ ಚುನಾವಣೆಗಳಲ್ಲಿ ಶತಾಯಗತಾಯ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಹೈಕಮಾಂಡ್ ಈಗ ಕರ್ನಾಟಕದ ಕಡೆಗೆ ಸಂಪೂರ್ಣ ಫೋಕಸ್ ಮಾಡಿದೆ. ಪಕ್ಷದ ಒಳಗೆ ಮತ್ತು ಹೊರಗೆ ಭಾರಿ ‘ರಿಪೇರಿ’ಗೆ ಮುಂದಾಗಿರುವ ದೆಹಲಿ ನಾಯಕರು, ರಾಜ್ಯಕ್ಕೆ ಸರಣಿ ಭೇಟಿ ನೀಡುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ವೀಕ್ಷಕರ ಮೊದಲ ತಂಡ ಈಗಾಗಲೇ ಸಿಲಿಕಾನ್ ಸಿಟಿಗೆ ಲಗ್ಗೆ ಇಟ್ಟಿದೆ. ಬಿಜೆಪಿ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್, ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜಯ್ ಪಾಂಡಾ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರ್‌ವಾಲ್ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ನಾಯಕರು ಗುರುವಾರ ರಾಜ್ಯ ಬಿಜೆಪಿಯ ಪ್ರಮುಖ ನಾಯಕರನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಎಸ್‌ಐಆರ್ ಹಿನ್ನೆಲೆಯಲ್ಲಿ ರಾಜ್ಯ ನಾಯಕರ ಜೊತೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷರ ಭೇಟಿಯ ಬೆನ್ನಲ್ಲೇ ಮೇ 25ರಂದು ಕೇಂದ್ರದ ಮತ್ತೊಂದು ಪ್ರಭಾವಿ ವೀಕ್ಷಕರ ತಂಡ ರಾಜ್ಯಕ್ಕೆ ಆಗಮಿಸಲಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಭೂಪೇಂದ್ರ ಯಾದವ್ ಮತ್ತು ತರುಣ್ ಚುಗ್ ಎರಡನೇ ತಂಡದಲ್ಲಿ ವೀಕ್ಷಕರಾಗಿ ಬರಲಿದ್ದು, ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಅಂತಿಮ ಹಂತದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ಸಂಘಟನಾ ಚುನಾವಣೆ ನಡೆಸುವ ಸಾಧ್ಯತೆ ಇರುವುದರಿಂದ ಈ ಭೇಟಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.
ರಾಜ್ಯಾಧ್ಯಕ್ಷರ ಆಯ್ಕೆಯ ಚರ್ಚೆಯ ನಡುವೆಯೇ, ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಾಜ್ಯ ಬಿಜೆಪಿ ಕೋರ್ ಕಮಿಟಿ ಪುನಾರಚನೆ ವಿಚಾರ ಮತ್ತೆ ಮುಂಚೂಣಿಗೆ ಬಂದಿದೆ. 2021ರ ಬಳಿಕ ರಾಜ್ಯ ಕೋರ್ ಕಮಿಟಿ ಪುನರ್ರಚನೆಯಾಗಿಲ್ಲ. ಕೆ.ಎಸ್. ಈಶ್ವರಪ್ಪ ಮತ್ತು ಲಕ್ಷ್ಮಣ ಸವದಿ ಅವರು ಪಕ್ಷದಿಂದ ಹೊರನಡೆದ ನಂತರ ಆ ಎರಡು ಪ್ರಮುಖ ಸ್ಥಾನಗಳು ಇನ್ನೂ ಖಾಲಿ ಇವೆ. ಈ ಖಾಲಿ ಇರುವ ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲು ಮತ್ತು ಕೋರ್ ಕಮಿಟಿ ಸೇರಲು ರಾಜ್ಯದ ಪ್ರಮುಖ ನಾಯಕರಾದ ವಿ.ಸುನಿಲ್ ಕುಮಾರ್, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಹಾಗೂ ಜಗದೀಶ್ ಶೆಟ್ಟರ್ ತೀವ್ರ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.
























