ಜಾನುವಾರು ಅಕ್ರಮ ಸಾಗಾಟ : ಇಬ್ಬರು ಆರೋಪಿಗಳ ಬಂಧನ

ಕಾರಿನ ಹಿಂದಿನ ಸೀಟು ತೆಗೆದು ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪಿಗಳು

ಮೂಡುಬಿದಿರೆ : ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಹಂಡೇಲಿನ ಮಹಮ್ಮದ್ ಆರಿಫ್ ಮತ್ತು ಆತನ ಸಹಚರ ಗಂಟಾಲಕಟ್ಟೆಯ ಇಮ್ರಾನ್ ಯಾನೆ ಇಬ್ರಾಹಿಂ ಬಂಧಿತ ಆರೋಪಿಗಳು.

ಗುರುವಾರ ಬೆಳಗ್ಗೆ 7 ಗಂಟೆಗೆ ಪಿಎಸ್‌ಐ ಕೃಷ್ಣಪ್ಪ ಮತ್ತು ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳುವಾಯಿ ಕಡೆಯಿಂದ ಮಾರ್ನಾಡು ಅಳಿಯೂರು ಕಡೆಗೆ ಮಾರುತಿ ಬ್ರೀಜಾ ಕಾರಿನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ಲಭಿಸಿ ಪೊಲೀಸರು ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದರು.





















































 
 

ಸುಮಾರು 7.30ರ ವೇಳೆಗೆ ಬೆಳುವಾಯಿ ಕಡೆಯಿಂದ ಬಂದ ಕಾರನ್ನು ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೆ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದು, ಈ ವಾಹನವನ್ನು ಬೆನ್ನಟ್ಟಿದಾಗ ಗುಂಡುಕಲ್ಲು 5 ಸೆಂಟ್ಸ್ ರಸ್ತೆಗೆ ತಿರುಗಿ ಸಾಹುಲ್ ಹಮೀದ್ ಎಂಬುವರ ಮನೆ ಕಂಪೌಂಡ್ ಒಳಭಾಗದಲ್ಲಿ ಕಾರನ್ನು ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರನ್ನು ಪರಿಶೀಲಿಸಿದಾಗ ಕಾರಿನ ಹಿಂಬದಿ ಸೀಟನ್ನು ತೆಗೆದು ಅದರ ಮೇಲೆ ನೀಲಿ ಬಣ್ಣದ ಪ್ಲಾಸ್ಟಿಕ್ ಹಾಕಿ ಅದರ ಮೇಲೆ 1 ಗಂಡು ಕರುವನ್ನು ಹಿಂಸಾತ್ಮಕವಾಗಿ ಕಾಲು ಮತ್ತು ತಲೆಯನ್ನು ಹಗ್ಗದಿಂದ ಕಟ್ಟಿ ಸಾಗಿಸುತ್ತಿರುವುದು ಕಂಡುಬಂದಿದೆ. ಆರೋಪಿಗಳು ಕಳೆದ ಒಂದು ವಾರದಿಂದ ವಿವಿಧೆಡೆ ದನಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಸಾಹುಲ್ ಹಮೀದ್‌ರವರ ಮನೆಯ ಬಳಿ ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ ಸಂಗ್ರಹಣೆ ಮಾಡಿರುವುದಾಗಿ ಆರೋಪಿಗಳು ತಿಳಿಸಿರುತ್ತಾರೆ. ಆರೋಪಿಗಳು ಸಾಗಾಟ ಮಾಡುತ್ತಿದ್ದ ದನವನ್ನು, ಸಾಗಾಟ ಮಾಡಲು ಬಳಸಿದ ಕಾರನ್ನು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಂಧಿತ ಆರೋಪಿ ಮೊಹಮ್ಮದ್ ಆರಿಫ್ ಎಂಬಾತನ ವಿರುದ್ಧ ಈಗಾಗಲೇ ಬಜಪೆ, ಬಣಕಲ್, ಮೂಡುಬಿದಿರೆ ಹಾಗೂ ಆರೋಪಿ ಇಮ್ರಾನ್ ವಿರುದ್ಧ ಮೂಡುಬಿದಿರೆ ಹಾಗೂ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!
Scroll to Top