ಸೋಮವಾರದಿಂದ ಹೊಸ ಅಬಕಾರಿ ನೀತಿ ಜಾರಿ

ಹೆಚ್ಚು ಕಿಕ್‌ ಕೊಡುವ ಕಡಿಮೆ ಬೆಲೆಯ ಮದ್ಯದ ಬೆಲೆ ಏರಿಕೆ

ಬೆಂಗಳೂರು: ರಾಜ್ಯ ಸರ್ಕಾರ ಮದ್ಯದ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದು, “ಆಲ್ಕೋಹಾಲ್ ಇನ್ ಬೇವರೇಜ್” (ಎಐಬಿ) ಆಧಾರಿತ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತರಲು ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಹೊಸ ನೀತಿ ಮೇ 11ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ.

ಈ ಮೂಲಕ ಕಳೆದ 6 ದಶಕಗಳಿಂದ ಜಾರಿಯಲ್ಲಿದ್ದ “ಬಲ್ಕ್ ಲೀಟರ್” ಆಧಾರಿತ ತೆರಿಗೆ ವ್ಯವಸ್ಥೆಗೆ ತೆರೆ ಬೀಳಲಿದೆ. ಕರ್ನಾಟಕ ದೇಶದಲ್ಲೇ ಮೊದಲ ಬಾರಿಗೆ ಎಐಬಿ ಆಧಾರಿತ ತೆರಿಗೆ ನೀತಿಯನ್ನು ಅನುಷ್ಠಾನಗೊಳಿಸುತ್ತಿರುವ ರಾಜ್ಯವಾಗಿದೆ.





















































 
 

ಏಪ್ರಿಲ್ 18ರಂದು ಕರಡು ಅಧಿಸೂಚನೆ ಹೊರಡಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಿತ್ತು. ಬಂದ ಅಭಿಪ್ರಾಯಗಳನ್ನು ಪರಿಗಣಿಸಿದ ಬಳಿಕ ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕ) (2ನೇ ತಿದ್ದುಪಡಿ) ನಿಯಮಗಳು, 2026 ಅನ್ನು ಅಂತಿಮಗೊಳಿಸಲಾಗಿದೆ.

ಹೊಸ ನೀತಿಯ ಪ್ರಕಾರ, ಬ್ರಾಂಡಿ, ವಿಸ್ಕಿ, ರಮ್, ಜಿನ್, ಬಿಯರ್, ವೈನ್ ಸೇರಿದಂತೆ ವಿವಿಧ ಮದ್ಯಗಳಲ್ಲಿ ಇರುವ “ಆಲ್ಕೋಹಾಲ್ ಪ್ರಮಾಣ” ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಈಗಿರುವ 16 ಅಬಕಾರಿ ಸ್ಲ್ಯಾಬ್‌ಗಳನ್ನು ಕಡಿತಗೊಳಿಸಿ ಕೇವಲ 8 ಸ್ಲ್ಯಾಬ್‌ಗಳಿಗೆ ಸೀಮಿತಗೊಳಿಸಲಾಗಿದೆ.

ಅಬಕಾರಿ ಇಲಾಖೆಯ ಆದಾಯದಲ್ಲಿ ಪ್ರಮುಖ ಪಾತ್ರವಹಿಸುವ ಕಡಿಮೆ ದರದ ಮದ್ಯ ವಿಭಾಗದ ಮೇಲೆ ಈ ನೀತಿಯ ಪರಿಣಾಮ ಹೆಚ್ಚು ಕಾಣಿಸಿಕೊಳ್ಳಲಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ. ವಿಶೇಷವಾಗಿ ಹೆಚ್ಚು ಮಾರಾಟವಾಗುವ 180 ಮಿಲಿ ಟೆಟ್ರಾ ಪ್ಯಾಕ್‌ಗಳ ವಿಸ್ಕಿ, ರಮ್, ಬ್ರಾಂಡಿ, ಜಿನ್ ಹಾಗೂ ವೋಡ್ಕಾ ಬೆಲೆ ಕನಿಷ್ಠ 20% ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದೇ ವೇಳೆ ಪ್ರೀಮಿಯಂ ಮದ್ಯ ಬ್ರ್ಯಾಂಡ್‌ಗಳ ಬೆಲೆ ಶೇ.16 ರಿಂದ ಶೇ.20ವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಬಹುರಾಷ್ಟ್ರೀಯ ಪ್ರೀಮಿಯಂ ಬ್ರ್ಯಾಂಡ್‌ಗಳಿಗೆ ಲಾಭವಾಗಬಹುದು, ಆದರೆ, ಸ್ಥಳೀಯ ಡಿಸ್ಟಿಲರಿಗಳು ಮತ್ತು ಪ್ರಾದೇಶಿಕ ಉತ್ಪಾದಕರಿಗೆ ಹಿನ್ನಡೆ ಉಂಟಾಗಬಹುದು ಎಂದು ಉದ್ಯಮ ವಲಯ ಆತಂಕ ವ್ಯಕ್ತಪಡಿಸಿದೆ.

ಕಡಿಮೆ ಬೆಲೆಯ ಭಾರತೀಯ ಮದ್ಯ ಉತ್ಪಾದಕರಿಗೆ ಈ ಹೊಸ ವ್ಯವಸ್ಥೆ ಹೊರೆ ಆಗಬಹುದು. ಸ್ಥಳೀಯ ಹೂಡಿಕೆ ಮತ್ತು ಉದ್ಯೋಗಾವಕಾಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದೆಡೆ, ಇಂಡಿಯನ್ ಸ್ಪಿರಿಟ್ಸ್ ಆ್ಯಂಡ್ ವೈನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಈ ನೀತಿಯನ್ನು ಸ್ವಾಗತಿಸಿದೆ. ಸಂಸ್ಥೆಯ ಸಿಇಒ ಸಂಜಿತ್ ಪಾಧಿ ಮಾತನಾಡಿ, ಇದು ಅಬಕಾರಿ ವ್ಯವಸ್ಥೆಯನ್ನು ಆಧುನೀಕರಿಸುವ ಹಾಗೂ ಸರಳಗೊಳಿಸುವ ಮುನ್ನೋಟದ ಹೆಜ್ಜೆಯಾಗಿದೆ. ಈ ಮೂಲಕ ಪ್ರೀಮಿಯಂ ಉತ್ಪನ್ನಗಳ ಬೆಳವಣಿಗೆಗೆ ಉತ್ತೇಜನ ಸಿಗಲಿದೆ ಎಂದು ಹೇಳಿದ್ದಾರೆ. “Drink Better, Not More” ಎಂಬ ತತ್ವಕ್ಕೆ ಈ ನೀತಿ ಹೊಂದಿಕೆಯಾಗಿದ್ದು, ಗುಣಮಟ್ಟದ ಮದ್ಯ ಸೇವನೆಗೆ ಉತ್ತೇಜನ ನೀಡಲಿದೆ ಎಂದು ತಿಳಿಸಿದ್ದಾರೆ.

error: Content is protected !!
Scroll to Top