ಕಾಂಗ್ರೆಸ್‌ ಹೈಕಮಾಂಡ್‌ ಪಾಲಿಗೆ ಕಗ್ಗಂಟಾದ ಕೇರಳಂ ಸಿಎಂ ಆಯ್ಕೆ

ಕರ್ನಾಟಕದಂತೆ ಕಚ್ಚಾಟದತ್ತ ಮುಖಮಾಡಿದ ಕೇರಳಂ

ತಿರುವನಂತಪುರಂ: ಕರ್ನಾಟಕದಂತೆ ಕೇರಳ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಭರ್ಜರಿ ಜಯಭೇರಿ ಬಾರಿಸಿದ್ದರೂ ಮುಖ್ಯಮಂತ್ರಿ ಪಟ್ಟ ಮಾತ್ರ ಕಗ್ಗಂಟಾಗಿ ಪರಿಣಮಿಸಿದೆ. ಕರ್ನಾಟಕದಲ್ಲಾದರೆ ಮುಖ್ಯಮಂತ್ರಿ ಪಟ್ಟಕ್ಕೆ ಇಬ್ಬರು ಮಾತ್ರ ಹಕ್ಕು ಮಂಡನೆ ಮಾಡಿದ್ದರು. ಆದರೆ ಕೇರಳದಲ್ಲಿ ಪ್ರಧಾನವಾಗಿ ಮೂವರು ಪ್ರಮುಖ ನಾಯಕರಿದ್ದಾರೆ, ಇವರ ಅಲ್ಲದಿದ್ದರೆ ತಮಗಾದರೂ ಕೊಡಿ ಎನ್ನುವ ಇನ್ನೂ ಕೆಲವರಿದ್ದಾರೆ.

ನಿಚ್ಚಳ ಬಹುಮತದೊಂದಿಗೆ ಮುಸ್ಲಿಂ ಲೀಗ್‌ ಒಳಗೊಂಡಿರುವ ಯುಡಿಎಫ್ ಮೈತ್ರಿಕೂಟ ಅಧಿಕಾರಕ್ಕೆ ಬಂದಿದ್ದರೂ ಈಗ ಮುಖ್ಯಮಂತ್ರಿ ಆಯ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಾಲ್ವರು ಘಟಾನುಘಟಿ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದ್ದು, ಅಂತಿಮ ನಿರ್ಧಾರಕ್ಕಾಗಿ ಇಡೀ ಕೇರಳ ಕಾಂಗ್ರೆಸ್ ಈಗ ದೆಹಲಿಯ ಹೈಕಮಾಂಡ್‌ನತ್ತ ಮುಖ ಮಾಡಿದೆ.





















































 
 

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಹೈಕಮಾಂಡ್‌ನ ಅತ್ಯಂತ ಪರಮಾಪ್ತ ಕೆ.ಸಿ. ವೇಣುಗೋಪಾಲ್, ನಿರ್ಗಮಿತ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ವಿಧಾನಸಭೆ ಗೆಲುವಿನ ರೂವಾರಿ ಎನ್ನಲಾಗುತ್ತಿರುವ ವಿ.ಡಿ. ಸತೀಶನ್, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ, ಪ್ರಭಾವಿ ನಾಯಕ ಸನ್ನಿ ಜೋಸೆಫ್ ಸಿಎಂ ರೇಸ್‌ನ ಮುಂಚೂಣಿಯಲ್ಲಿದ್ದಾರೆ. ಇವರು ತಮ್ಮದೇ ಆದ ಬಣಗಳನ್ನು ಹೊಂದಿದ್ದು, ಯಾರನ್ನೇ ಮುಖ್ಯಮಂತ್ರಿ ಮಾಡಿದರೂ ಕಚ್ಚಾಟ ಗ್ಯಾರಂಟಿ ಎನ್ನುವ ಪರಿಸ್ಥಿತಿ ಇದೆ.

ಸಿಎಂ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ನಿನ್ನೆ ಕೇಂದ್ರ ವೀಕ್ಷಕ ಮುಕುಲ್ ವಾಸ್ನಿಕ್ ಅವರು ನೂತನ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದರು. ಆದರೆ ಈ ರಹಸ್ಯ ಪ್ರಕ್ರಿಯೆಯ ಮಾಹಿತಿ ಈಗ ಬಹಿರಂಗವಾಗಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಶಾಸಕರು ತಮ್ಮ ಅಭಿಪ್ರಾಯ ದಾಖಲಿಸಿದ್ದ ಪಟ್ಟಿಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಹೆಚ್ಚಿನ ಶಾಸಕರು ಹೆಸರಿನ ಮುಂದೆ ‘KC’ (ಕೆ.ಸಿ. ವೇಣುಗೋಪಾಲ್) ಎಂದು ಬರೆದು ಬೆಂಬಲ ಸೂಚಿಸಿರುವುದು ಬೆಳಕಿಗೆ ಬಂದಿದೆ.

ರಹಸ್ಯವಾಗಿರಬೇಕಿದ್ದ ಶಾಸಕರ ಅಭಿಪ್ರಾಯದ ಮಾಹಿತಿ ಮತ್ತು ಪಟ್ಟಿಯ ಫೋಟೋ ಸೋರಿಕೆಯಾಗಿರುವುದಕ್ಕೆ ಕೇರಳ ರಾಜ್ಯ ಕಾಂಗ್ರೆಸ್ ತೀವ್ರ ಅಸಮಾಧಾನ ಹೊರಹಾಕಿದೆ. ಇದು ಪಕ್ಷದ ಶಿಸ್ತಿನ ಉಲ್ಲಂಘನೆ ಎಂದು ಕೆಲವು ನಾಯಕರು ದೂರಿದ್ದಾರೆ.

ಕೇರಳದ ಬೆಳವಣಿಗೆಗಳ ಕುರಿತು ವೀಕ್ಷಕರಾದ ಅಜಯ್ ಮಾಕೇನ್ ಮತ್ತು ಮುಕುಲ್ ವಾಸ್ನಿಕ್ ಅವರು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಮಗ್ರ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಶಾಸಕರ ಅಭಿಪ್ರಾಯ ಮತ್ತು ರಾಜ್ಯದ ರಾಜಕೀಯ ಸ್ಥಿತಿಗತಿಗಳನ್ನು ಆಧರಿಸಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಹೈಕಮಾಂಡ್‌ನಿಂದ ನೂತನ ಮುಖ್ಯಮಂತ್ರಿಯ ಹೆಸರು ಇಂದು ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ. ಸೋಮವಾರ ತಿರುವನಂತಪುರಂನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ.

ಯಾರೇ ಮುಖ್ಯಮಂತ್ರಿಯಾದರೂ ಕರ್ನಾಟಕದ ಮಾದರಿ ನಾಯಕರ ನಡುವೆ ಕಚ್ಚಾಟ ನಡೆಯುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ನಡುವಿನ ಕಚ್ಚಾಟವನ್ನು ಎರಡೂವರೆ ಕಳೆದರೂ ಬಗೆಹರಿಸಲು ಕಾಂಗ್ರೆಸ್‌ ಹೈಕಮಾಂಡ್‌ನಿಂದ ಸಾಧ್ಯವಾಗಿಲ್ಲ. ಈಗ ಕೇರಳವೂ ಈ ಸಾಲಿಗೆ ಸೇರ್ಪಡೆಯಾಗುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ.

error: Content is protected !!
Scroll to Top