ಕಲ್ಲಂಗಡಿಯೊಳಗೆ ಸೇರಿಕೊಂಡಿದ್ದ ಅಪಾಯಕಾರಿ ವಿಷದಿಂದ ಸಾವು
ಮುಂಬೈ: ಮುಂಬೈಯ ಒಂದೇ ಕುಟುಂಬದ ನಾಲ್ಕು ಮಂದಿ ಕಲ್ಲಂಗಡಿ ಹಣ್ಣು ತಿಂದು ಸಾವಿಗೀಡಾಗಿರುವ ರಹಸ್ಯ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಬಯಲಾಗಿದೆ. ಅವರ ಸಾವಿಗೆ ಕಲ್ಲಂಗಡಿ ಕಾರಣವಲ್ಲ ಬದಲಾಗಿ ಹಣ್ಣಿನೊಳಗಿದ್ದ ಇಲಿ ಪಾಷಾಣ ಕಾರಣ ಎಂದು ವಿಧಿವಿಜ್ಞಾನ ಪರೀಕ್ಷೆಯಿಂದ ದೃಢಪಟ್ಟಿದೆ.
ಮಟನ್ ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಹಣ್ಣು ತಿಂದಿದ್ದರಿಂದ ಫುಡ್ ಪಾಯಿಸನ್ ಆಗಿ ಮುಂಬೈನ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣ ದೇಶಾದ್ಯಂತ ಆತಂಕಕ್ಕೆ ಕಾರಣವಾಗಿತ್ತು. ಆದರೆ ಅವರು ಮೃತಪಟ್ಟಿರುವುದು ಕಲ್ಲಂಗಡಿ ಸೇವನೆಯಿಂದಲ್ಲ, ಬದಲಾಗಿ ಇಲಿ ಪಾಷಾಣದಿಂದ ಎಂಬುದು ವಿಧಿವಿಜ್ಞಾನ ಪರೀಕ್ಷೆಯಿಂದ ದೃಢಪಟ್ಟಿದೆ.
ಮೃತದೇಹಗಳಲ್ಲಿ ಹಾಗೂ ಅವರು ತಿಂದಿದ್ದ ಕಲ್ಲಂಗಡಿ ಹಣ್ಣಿನ ಮಾದರಿಯಲ್ಲಿ ಇಲಿಗಳನ್ನು ಕೊಲ್ಲಲು ಬಳಸುವ ಝಿಂಕ್ ಫಾಸ್ಫೈಡ್ ಎಂಬ ವಿಷಕಾರಿ ರಾಸಾಯನಿಕದ ಅಂಶ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯ ವೇಳೆ ಮೃತರ ಆಂತರಿಕ ಅಂಗಗಳು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡುಬಂದಿತ್ತು. ಇದು ವಿಷಪ್ರಾಶನದ ಸ್ಪಷ್ಟ ಲಕ್ಷಣವಾಗಿದ್ದು, ವಿಧಿವಿಜ್ಞಾನ ವರದಿಯು ಸಾವಿನ ಅಸಲಿ ಕಾರಣವನ್ನು ಬಯಲು ಮಾಡಿದೆ.
ಅಬ್ದುಲ್ಲಾ ಡೊಕಾಡಿಯಾ (45), ಪತ್ನಿ ನಸ್ರೀನ್ (35), ಮಕ್ಕಳಾದ ಝೈನಬ್ (13) ಮತ್ತು ಆಯೇಷಾ ಬಿರಿಯಾನಿ ಬಳಿಕ ಕಲ್ಲಂಗಡಿ ಹಣ್ಣು ತಿಂದು ತೀವ್ರ ವಾಂತಿ ಮತ್ತು ಭೇದಿಯಿಂದ ಮೃತಪಟ್ಟಿದ್ದರು. ಈ ಕುಟುಂಬ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಸಂಬಂಧಿಕರಿಗೆ ಔತಣಕೂಟ ಏರ್ಪಡಿಸಿತ್ತು. ರಾತ್ರಿ ಊಟಕ್ಕೆ ಮಟನ್ ಬಿರಿಯಾನಿ ಬಡಿಸಲಾಗಿತ್ತು. ಊಟ ಮುಗಿಸಿ ಸಂಬಂಧಿಕರು ತೆರಳಿದ ಬಳಿಕ ಮಧ್ಯರಾತ್ರಿ ಕುಟುಂಬದ ನಾಲ್ವರು ಕಲ್ಲಂಗಡಿ ಹಣ್ಣನ್ನು ತಿಂದಿದ್ದಾರೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ನಾಲ್ವರಿಗೂ ತೀವ್ರ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದ್ದು, ಕೆಲವೇ ಗಂಟೆಗಳ ಅಂತರದಲ್ಲಿ ಎಲ್ಲರೂ ಪ್ರಾಣಬಿಟ್ಟಿದ್ದರು.
ನಾಲ್ವರ ಸಾವಿಗೆ ಝಿಂಕ್ ಫಾಸ್ಫೈಡ್ (ಇಲಿ ಪಾಷಾಣ) ಕಾರಣ. ವೈದ್ಯರು ಮೃತರ ದೇಹ ಹಾಗೂ ಕಲ್ಲಂಗಡಿ ಹಣ್ಣು ಎರಡರಲ್ಲೂ ಈ ರಾಸಾಯನಿಕವನ್ನು ಪತ್ತೆಹಚ್ಚಿದ್ದಾರೆ. ಕಳೆದ ವಾರ ನಡೆಸಲಾದ ಪ್ರಾಥಮಿಕ ಪರೀಕ್ಷೆಯಲ್ಲಿ ಮೃತರ ಮೆದುಳು, ಹೃದಯ ಮತ್ತು ಕರುಳು ಸೇರಿದಂತೆ ಆಂತರಿಕ ಅಂಗಗಳು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡುಬಂದಿತ್ತು.
ಕಲ್ಲಂಗಡಿ ಹಣ್ಣಿಗೆ ಆಕಸ್ಮಿಕವಾಗಿ ಇಲಿಪಾಷಾಣ ಬೆರೆತಿದೆಯೋ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಹಣ್ಣಿನೊಳಗೆ ಇಂಜೆಕ್ಷನ್ ಮೂಲಕ ವಿಷವನ್ನು ಸೇರಿಸಿದ್ದಾರೋ ಎಂಬ ಆಯಾಮದಲ್ಲಿ ಮುಂಬೈ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
























