ಪಕ್ಷದ ಸೋಲಿನ ಬೆನ್ನಲ್ಲೇ ರಾಜೀನಾಮೆ ನೀಡಿದ ಮಾಜಿ ಸಚಿವನಿಂದ ಗಂಭೀರ ಆರೋಪ
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸಿದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್‌ನ ಆಂತರಿಕ ಕಲಹ ಬೀದಿಗೆ ಬಿದ್ದಿದೆ. ಟಿಎಂಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ಗಾಗಿ ತಲಾ 5 ಕೋ. ರೂ. ವಸೂಲು ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಕ್ರೀಡಾ ರಾಜ್ಯ ಸಚಿವರಾಗಿದ್ದ ಮನೋಜ್ ತಿವಾರಿ ಪಕ್ಷದ ಸೋಲಿನ ಬೆನ್ನಲ್ಲೇ ಪಕ್ಷಕ್ಕೆ ರಾಜೀನಾಮೆ ನೀಡಿ ತೃಣಮೂಲ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಪಕ್ಷ ತೊರೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮನೋಜ್ ತಿವಾರಿ, ಈ ಬಾರಿ ನನಗೆ ಶಿಬ್‌ಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲಾಯಿತು. ಇದಕ್ಕೆ ಕಾರಣ ನಾನು ಪಕ್ಷ ಕೇಳಿದ 5 ಕೋಟಿ ರೂಪಾಯಿ ಹಣವನ್ನು ನೀಡಲು ನಿರಾಕರಿಸಿದ್ದು. ನನ್ನಂತೆ ಸುಮಾರು 70ರಿಂದ 72 ಅಭ್ಯರ್ಥಿಗಳು ಟಿಕೆಟ್‌ಗಾಗಿ ಇಷ್ಟೇ ಪ್ರಮಾಣದ ಹಣ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಿರ್ಗಮಿತ ಹಿರಿಯ ಕ್ರೀಡಾ ಸಚಿವ ಮನೋಜ್ ತಿವಾರಿ, ತೃಣಮೂಲ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅರೂಪ್ ಬಿಸ್ವಾಸ್ ಅವರ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಬಂಗಾಳದಲ್ಲಿ ಸರಿಯಾದ ಕ್ರೀಡಾ ನೀತಿಯನ್ನು ಜಾರಿಗೆ ತರುವಲ್ಲಿ ಬಿಸ್ವಾಸ್ ವಿಫಲರಾಗಿದ್ದಾರೆ ಮತ್ತು ಕ್ರೀಡಾ ಇಲಾಖೆಯ ಬಜೆಟ್ ಬಳಕೆಯಲ್ಲೂ ಪಾರದರ್ಶಕತೆ ಇರಲಿಲ್ಲ ಎಂದು ದೂರಿದ್ದಾರೆ.
ಇತ್ತೀಚೆಗೆ ನಡೆದ ಲಿಯೋನೆಲ್ ಮೆಸ್ಸಿ ಅವರ ಕೋಲ್ಕತ್ತಾ ಭೇಟಿಯ ಕಾರ್ಯಕ್ರಮವು “ಸಂಪೂರ್ಣ ಅವ್ಯವಸ್ಥೆ”ಯಿಂದ ಕೂಡಿತ್ತು ಎಂದು ಅವರು ಬಣ್ಣಿಸಿದ್ದಾರೆ. ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಳ್ಳಲಾದ ಆ ಕಾರ್ಯಕ್ರಮದಿಂದ ತಾವು ಉದ್ದೇಶಪೂರ್ವಕವಾಗಿಯೇ ದೂರ ಉಳಿದಿದ್ದಾಗಿ ಇದೇ ವೇಳೆ ಮನೋಜ್ ತಿವಾರಿ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಸೋಲಿಗೆ ಭ್ರಷ್ಟಾಚಾರವೇ ಮುಖ್ಯ ಕಾರಣ ಎಂದಿರುವ ಮನೋಜ್ ತಿವಾರಿ, ಸದ್ಯಕ್ಕೆ ಯಾವುದೇ ರಾಜಕೀಯ ಪಕ್ಷವನ್ನು ಸೇರುವ ಉದ್ದೇಶ ತಮಗಿಲ್ಲ ಎಂದು ಹೇಳಿದ್ದಾರೆ. ರಾಜಕೀಯದಿಂದ ಬ್ರೇಕ್ ಪಡೆದು, ಕ್ರಿಕೆಟ್ ಕೋಚಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ.
ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಚಿವರಾಗಿದ್ದ ಮನೋಜ್ ತಿವಾರಿ ಅವರ ಈ ಬಹಿರಂಗ ಹೇಳಿಕೆಯು 15 ವರ್ಷಗಳ ಕಾಲ ಆಡಳಿತ ನಡೆಸಿದ ಟಿಎಂಸಿ ಪಕ್ಷಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಅದರಲ್ಲೂ ನೋಟಿಗೆ ಸೀಟು ಎಂಬ ಗಂಭೀರ ಆರೋಪವು ರಾಜಕೀಯ ಚರ್ಚೆಯನ್ನು ಹುಟ್ಟು ಹಾಕಿದೆ.
























