ಬಿಎಸ್ಎಫ್ ಹೆಡ್ಕ್ವಾರ್ಟರ್ಸ್, ಸೇನಾ ನೆಲೆಯ ಬಳಿ ಸ್ಫೋಟ
ಜಲಂಧರ್ : ಪಂಜಾಬಿನ ಜಲಂಧರ್ನಲ್ಲಿರುವ ಬಿಎಸ್ಎಫ್ ಪ್ರಧಾನ ಕಚೇರಿ ಸಮೀಪ ಬಿಎಸ್ಎಫ್ ಚೌಕ್ ಪ್ರದೇಶದಲ್ಲಿ ಮತ್ತು ಅಮೃತಸರದಲ್ಲಿ ಸೇನಾ ನೆಲೆಯ ಸಮೀಪ ಬೆನ್ನುಬೆನ್ನಿಗೆ ಎರಡು ಸ್ಫೋಟಗಳು ನಿನ್ನೆ ರಾತ್ರಿ ಸಂಭವಿಸಿದ್ದು, ವಿಧ್ವಂಸಕ ಕೃತ್ಯವೆಂದು ಅನುಮಾನಿಸಲಾಗಿದೆ. ಜಲಂಧರ್ನಲ್ಲಿ ಸ್ಕೂಟರ್ ಒಂದರಲ್ಲಿ ಸಂಭವಿಸಿದ ಸ್ಫೋಟ ಇಡೀ ನಗರವನ್ನು ಭೀತಿಗೀಡುಮಾಡಿದೆ. ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡು ಬೆಂಕಿಗೆ ಆಹುತಿಯಾಗಿದೆ.
ಸ್ಫೋಟದ ತೀವ್ರತೆಗೆ ಗಾಬರಿಗೊಂಡ ವ್ಯಕ್ತಿಯೊಬ್ಬ ಜೀವ ಉಳಿಸಿಕೊಳ್ಳಲು ಓಡುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಸ್ಕೂಟರ್ ಹೊತ್ತಿ ಉರಿಯುವ ಕೆಲವೇ ಕ್ಷಣಗಳ ಮೊದಲು ಗುಡುಗಿನಂತಹ ಭೀಕರ ಶಬ್ದ ಕೇಳಿಸಿತು.
ಘಟನೆ ಸಂಭವಿಸಿದ ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಅದೃಷ್ಟವಶಾತ್ ಈ ಸ್ಫೋಟದಲ್ಲಿ ಯಾವುದೇ ಸಾವುನೋವುಗಳು ಅಥವಾ ಗಾಯಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಬಿಎಸ್ಎಫ್ ಪ್ರಧಾನ ಕಚೇರಿಯ ಅತಿ ಸಮೀಪದಲ್ಲೇ ಈ ಘಟನೆ ನಡೆದಿರುವುದರಿಂದ ಪೊಲೀಸರು ಇಡೀ ಪ್ರದೇಶವನ್ನು ಬಿಗಿ ಭದ್ರತೆಯೊಳಗೆ ತಂದಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಸ್ಫೋಟದ ಹಿಂದಿನ ಅಸಲಿ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಜಲಂಧರ್ನಲ್ಲಿ ಸ್ಫೋಟ ಸಂಭವಿಸಿದ ತಾಸಿನ ಬಳಿಕ ಅಮೃತಸರದ ಖಾಸಾದಲ್ಲಿ ಸೇನಾ ಶಿಬಿರದ ಹೊರಗೆ ಇದೇ ಮಾದರಿಯ ಸ್ಫೋಟ ಸಂಭವಿಸಿದೆ. ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬ ಶಿಬಿರದ ಮೇಲೆ ಗ್ರೆನೇಡ್ ಎಸೆದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಜಾಗ ಅಟ್ಟಾರಿ-ವಾಘಾ ಅಂತಾರಾಷ್ಟ್ರೀಯ ಗಡಿಯಿಂದ ಬರೀ 15 ಕಿಲೋಮೀಟರ್ ದೂರದಲ್ಲಿದೆ. ಎರಡೂ ಸ್ಫೋಟಗಳ ನಡುವೆ ಪರಸ್ಪರ ಸಂಬಂಧವಿದೆ ಹಾಗೂ ಇದು ಭಯೋತ್ಪಾಕರ ಕೃತ್ಯ ಎಂದು ಪ್ರಾಥಮಿಕವಾಗಿ ಅನುಮಾನಿಸಲಾಗಿದೆ.
ರಾತ್ರಿ 10.30ರಿಂದ 11 ಗಂಟೆಯ ನಡುವೆ ಸೇನಾ ಶಿಬಿರದ ಹೊರಗಡೆಯೇ ಸ್ಫೋಟ ಸಂಭವಿಸದೆ ಎಂದು ಅಮೃತಸರ ಗ್ರಾಮೀಣ ಎಸ್ಪಿ ಆದಿತ್ಯ ವಾರಿಯರ್ ದೃಢಪಡಿಸಿದ್ದಾರೆ.
























