ಬೆಂಗಳೂರು: ತನಗೆ ಜೈಲಿನಲ್ಲಿ ಕನಿಷ್ಟ ಮೂಲಸೌಕರ್ಯಗಳನ್ನು ಸಹ ಜೈಲಧಿಕಾರಿಗಳು ನೀಡುತ್ತಿಲ್ಲ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ದರ್ಶನ್ ತೂಗುದೀಪ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಯಿತು.
ಈ ಸಂಬಂಧ ವರದಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ನ್ಯಾ. ಮೂ. ಜೆ. ಬಿ. ಪರ್ದೀವಾಲ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠ ನೊಟೀಸ್ ಜಾರಿ ಮಾಡಿದೆ.
ಆರೋಪಿ ದರ್ಶನ್ ಪರ ಹಿರಿಯ ವಕೀಲ ಮುಕುಲ್ ರೊಹಟಗಿ ವಾದ ಮಂಡಿಸಿದ್ದು, ದರ್ಶನ್‌ಗೆ ಐಷಾರಾಮಿ ಸೌಲಭ್ಯಗಳನ್ನು ಜೈಲಿನಲ್ಲಿ ನೀಡಬಾರದು ಎಂದು ಈ ಹಿಂದೆ ಕೋರ್ಟ್ ಹೇಳಿತ್ತು. ಆದರೆ ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವ ಜೈಲಧಿಕಾರಿಗಳು ಒಬ್ಬ ವಿಚಾರಣಾಧೀನ ಖೈದಿಗೆ ಸಿಗಬೇಕಾದ ಸಾಮಾನ್ಯ ಸವಲತ್ತುಗಳನ್ನು ಸಹ ದರ್ಶನ್‌ಗೆ ನೀಡುತ್ತಿಲ್ಲ. ಸರಿಯಾದ ಬೆಳಕಿನ ವ್ಯವಸ್ಥೆ ಸಹ ಇಲ್ಲದ ಕ್ವಾರಂಟೈನ್ ಕೊಠಡಿಯಲ್ಲಿ ಅವರನ್ನು ಇರಿಸಲಾಗಿದ್ದು, ಸರಿಯಾದ ಆಹಾರ ಸಹ ನೀಡಲಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಹಾಗೆಯೇ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ 260 ಸಾಕ್ಷಿಗಳ ಪೈಕಿ ಕೇವಲ 10 ಸಾಕ್ಷಿಗಳನ್ನಷ್ಟೇ ಈ ವರೆಗೆ ವಿಚಾರಣೆ ನಡೆಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
























