ಮಂಗಳೂರು: ಯುವತಿಯನ್ನು ಪ್ರೇಮಿಸುವ ನಾಟಕವಾಡಿ, ಮಗು ಕರುಣಿಸಿ ಬಳಿಕ ಮದುವೆಯಾಗದೆ ಮೋಸ ಮಾಡಿರುವ ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣ ಬಿಜೆಪಿಗೂ ಸಾಕಷ್ಟು ಮುಖಭಂಗ ಮಾಡುತ್ತಿದ್ದು, ಈ ಹಿನ್ನೆಲೆ ಪಕ್ಷದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮತ್ತೆ ಸ್ಪಷ್ಟೀಕರಣ ನೀಡಿದ್ದಾರೆ.
ಆರೋಪಿ ಕೃಷ್ಣನ ತಂದೆ ಜಗನ್ನಿವಾಸ್ ರಾವ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸಲಾಗಿದ್ದು, ಅವರಿಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅವರನ್ನು ಬಿಜೆಪಿ ಮುಖಂಡ ಎಂದು ಹೇಳುವುದು ತಪ್ಪು ಎಂದು ಅವರು ಖಡಕ್ಕಾಗಿ ನುಡಿದಿದ್ದಾರೆ.
ಈ ಪ್ರಕರಣ ನಡೆದ ಸಂದರ್ಭದಲ್ಲೇ ಎಲ್ಲಾ ತಪ್ಪುಗಳನ್ನು ಸರಿ ಮಾಡಿಕೊಳ್ಳುವಂತೆ ಅವರಿಗೆ ನೊಟೀಸ್ ನೀಡಲಾಗಿತ್ತು. ಜೊತೆಗೆ ಆರಂಭದಲ್ಲೇ ಈ ಘಟನೆಯನ್ನು ನಾನು ಖಂಡಿಸಿದ್ದೆ. ಆದರೆ ಆ ಸಮಯದಲ್ಲಿ ಸಮಸ್ಯೆಯನ್ನು ಪುತ್ತೂರು ಶಾಸಕರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುವುದಾಗಿ ಅವರು ತಿಳಿಸಿದ್ದರು. ಬಿಜೆಪಿ ಜಗನ್ನಿವಾಸ ರಾವ್ ಅವರೊಂದಿಗಿನ ಎಲ್ಲಾ ಸಂಬಂಧಗಳನ್ನು ಕಳೆದುಕೊಂಡಿದೆ. ಅವರು ಬಿಜೆಪಿಯ ಸದಸ್ಯ ಅಲ್ಲ. ಅವರ ಯಾವ ನಡೆಗೂ ಪಕ್ಷ ಹೊಣೆಯಲ್ಲ ಎಂದು ಕುಂಪಲ ಹೇಳಿದ್ದಾರೆ.
























