ಹೋಟೆಲ್, ಕ್ಯಾಟರಿಂಗ್ ಉದ್ಯಮಿಗಳಿಗೆ ಶಾಕ್ ನೀಡಿದ ಬೆಲೆ ಹೆಚ್ಚಳ
ನವದೆಹಲಿ : ವಾಣಿಜ್ಯ ಸಿಲಿಂಡರ್ ಬೆಲೆ ಯಲ್ಲಿ ಭಾರಿ ಏರಿಕೆಯಾಗಿದೆ. ಇಂದಿನಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಬರೋಬ್ಬರಿ 993 ರೂ. ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರಿ ಏರಿಕೆಯ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 3,071.50 ರೂಪಾಯಿ ತಲುಪಿದೆ. ಇದಕ್ಕೂ ಮೊದಲು ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2,078.50 ರೂಪಾಯಿ ಇತ್ತು. ಬೆಂಗಳೂರಿನಲ್ಲಿ 991 ರೂಪಾಯಿ ಏರಿಕೆಯಾಗಿದ್ದು, ಇಂದಿನಿಂದ ಒಂದು ಕಮರ್ಷಿಯಲ್ ಸಿಲಿಂಡರ್ ಬೆಲೆ ಬರೋಬ್ಬರಿ 3,152 ರೂ. ಆಗಲಿದೆ.
ಜಾಗತಿಕ ಇಂಧನ ಬೆಲೆಗಳ ಏರಿಕೆ ಮತ್ತು ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ದರ ಪರಿಷ್ಕರಣೆ ಮಾಡಲಾಗಿದೆ.
ಈ ಏರಿಕೆಯು ಹೋಟೆಲ್, ರೆಸ್ಟೋರೆಂಟ್ ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆಯನ್ನು ಉಂಟುಮಾಡಲಿದ್ದು ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಲಿದೆ.
ಪೆಟ್ರೋಲ್, ಡೀಸೆಲ್ ಮತ್ತು ಗೃಹಬಳಕೆಯ ಸಿಲಿಂಡರ್ ದರದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸುಮಾರು 33 ಕೋಟಿ ಗ್ರಾಹಕರು ಬಳಸುವ 14.2 ಕೆಜಿ ದೇಶೀಯ ಸಿಲಿಂಡರ್ ಬೆಲೆ ಯಥಾಸ್ಥಿತಿಯಲ್ಲಿದೆ.
ಒಟ್ಟು ಬಳಕೆಯ ಶೇಕಡಾ 90ರಷ್ಟು ಪಾಲನ್ನು ಹೊಂದಿರುವ ವಾಹನ ಸವಾರರಿಗೆ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿಯಲ್ಲಿ ವಿತರಿಸಲಾಗುವ ಸೀಮೆಎಣ್ಣೆಯ ಬೆಲೆಗಳು ಕೂಡ ಬದಲಾಗದೆ ಉಳಿದಿವೆ. ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1,950– 2,200 ರೂ. ಇತ್ತು.
ಎಟಿಎಫ್ ಬೆಲೆ ಯಥಾಸ್ಥಿತಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಏರಿಕೆಯಾಗಿದ್ದರೂ, ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗುವ ವಿಮಾನಯಾನ ಟರ್ಬೈನ್ ಇಂಧನ ಬೆಲೆಗಳನ್ನು ಯಥಾಸ್ಥಿತಿ ಉಳಿಸಿಕೊಳ್ಳಲಾಗಿದೆ. ಗ್ರಾಹಕರು ಮತ್ತು ವಿಮಾನಯಾನ ಸಂಸ್ಥೆಗಳನ್ನು ರಕ್ಷಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅಂತರರಾಷ್ಟ್ರೀಯ ಬೆಲೆ ಏರಿಕೆಯ ಹೊರೆಯನ್ನು ತಾವೇ ಹೀರಿಕೊಳ್ಳಲು ನಿರ್ಧರಿಸಿವೆ ಎಂದು ಐಒಸಿ ತಿಳಿಸಿದೆ. ಆದರೆ, ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ಇಂಧನ ಬೆಲೆಗಳನ್ನು ಹೆಚ್ಚಿಸಲಾಗಿದೆ.
ತೈಲ ಮಾರುಕಟ್ಟೆ ಕಂಪನಿಗಳ ಈ ನಿರ್ಧಾರದಿಂದಾಗಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಸುಮಾರು ಶೇ.80 ರಷ್ಟು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದು ಬಹುಪಾಲು ಗ್ರಾಹಕರಿಗೆ ಸ್ಥಿರತೆಯನ್ನು ಖಚಿತಪಡಿಸಿದೆ. ಶೇ.4 ರಷ್ಟು ಉತ್ಪನ್ನಗಳು ಬೆಲೆ ಇಳಿಕೆಯನ್ನು ಕಂಡಿದ್ದರೆ, ಕೇವಲ ಶೇ 16 ರಷ್ಟು ಇಂಧನಗಳು (ಮುಖ್ಯವಾಗಿ ಕೈಗಾರಿಕಾ ಬಳಕೆಯವು) ಬೆಲೆ ಏರಿಕೆಯನ್ನು ದಾಖಲಿಸಿವೆ.
ಅಂತಾರಾಷ್ಟ್ರೀಯ ಬೆಲೆ ಏರಿಳಿತಗಳಿಂದ ದೇಶೀಯ ಗ್ರಾಹಕರನ್ನು ರಕ್ಷಿಸುವ ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಐಒಸಿ ಸ್ಪಷ್ಟಪಡಿಸಿದೆ.

























