ಪುತ್ತೂರು: ಚಿನ್ನಾಭರಣದ ಆಸೆಯಿಂದ ಹದಿನಾಲ್ಕು ವರ್ಷಗಳ ಹಿಂದೆ ತನ್ನ ಸಂಬಂಧಿ ಮಹಿಳೆಯನ್ನು ಹತ್ಯೆ ಮಾಡಿ ಹೈಕೋರ್ಟ್‌ನಿಂದ ಶಿಕ್ಷೆಗೆ ತುತ್ತಾಗಿದ್ದರೂ, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆಂಧ್ರಪ್ರದೇಶದಲ್ಲಿ ಕಡಬ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಸುಳ್ಯದ ಅಜ್ಜಾವರ ನಿವಾಸಿ ಅಬ್ದುಲ್ ಅಜೀಜ್ ಎಂದು ಗುರುತಿಸಲಾಗಿದೆ.
ಅಜೀಜ್ 2012 ರ ಜನವರಿ 9 ರಂದು ಬೆಳ್ತಂಗಡಿಯ ತಣ್ಣೀರುಪಂಥದ ತನ್ನ ಸಂಬಂಧಿ ಖತೀಜಮ್ಮ ಎಂಬಾಕೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ. ಈತ ವಿದೇಶದಿಂದ ಮರಳಿದ್ದ ಸಮಯ ಅದಾಗಿದ್ದು, ಆತನಿಗೆ ಹಣದ ಅವಶ್ಯಕತೆ ಇತ್ತು. ಅದಕ್ಕಾಗಿ ಆತ ತನ್ನ ಸಹೋದರಿಯರ ಜೊತೆಗೆ ಸೇರಿ ಖತೀಜಮ್ಮನಿಂದ ಚಿನ್ನ ಲಪಟಾಯಿಸಲು ಸಂಚು ಮಾಡಿದ್ದ.
ಚಿನ್ನ ದೋಚುವ ವೇಳೆ ಖತೀಜಮ್ಮ ಪ್ರತಿರೋಧ ಒಡ್ಡಿದ್ದು, ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಬಳಿಕ ಆಕೆಯ ಮೃತ ದೇಹವನ್ನು ಕೊಂಬಾರಿನ ಅಮೈತ್ತಡ್ಕ ಮೋರಿಯಲ್ಲಿ ಎಸೆದು ಪರಾರಿಯಾಗಿದ್ದ. ಶವ ಕೊಳೆತು ನಾರುವಾಗ ಘಟನೆ ಬೆಳಕಿಗೆ ಬಂದಿತ್ತು.
ಆ ಬಳಿಕ ಪೊಲೀಸರು ಸಾಕ್ಷಿಗಳನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆರಂಭದಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿದ್ದರೂ, ಆ ಬಳಿಕ ಹೈಕೋರ್ಟ್ ಸರ್ಕಾರದ ಮೇಲ್ಮನವಿ ಪುರಸ್ಕರಿಸಿ ಆರೋಪಿಯನ್ನು ದೋಷಿ ಎಂದು ಘೋಷಿಸಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿತ್ತು.
ಶಿಕ್ಷೆ ಪ್ರಕಟವಾದ ಬಳಿಕ ಅಜೀಜ್ ತಲೆಮರೆಸಿಕೊಂಡಿದ್ದ. ಈಗ ಹೈದರಾಬಾದ್‌ನಲ್ಲಿ ಕಡು ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ. ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿ, ಜೈಲಿಗಟ್ಚಲಾಗಿದೆ.

























