ಐಪಿಎಲ್ ಪಂದ್ಯದ ದಿನವೇ ಸಿಸಿಟಿವಿ ಬಂದ್ ಆಗಿ ಆತಂಕದ ಪರಿಸ್ಥಿತಿ
ಬೆಂಗಳೂರು : ಕಳೆದ ಶುಕ್ರವಾರ ಆರ್ಸಿಬಿ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ಕೇಬಲ್ ಕಟ್ ಆಗಿ ಆತಂಕ ಮೂಡಿಸಿತ್ತು. ಇದು ವಿಧ್ವಂಸಕ ಕೃತ್ಯವಿರಬಹುದು ಎಂಬ ಅನುಮಾನದಲ್ಲಿ ತನಿಖೆ ಕೈಗೊಂಡಿದ್ದ ಕಬ್ಬನ್ ಪಾರ್ಕ್ ಪೊಲೀಸರಿಗೆ ಈಗ ತೀರಾ ವೈಯಕ್ತಿಕ ಕಾರಣ ತಿಳಿದುಬಂದಿದೆ.
ಕ್ರೀಡಾಂಗಣದ ಭದ್ರತೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ನಿರ್ವಹಣೆಯ ಹೊಣೆಯನ್ನು ‘IVS ಡಿಜಿಟಲ್ ಸೊಲ್ಯೂಷನ್’ ಎಂಬ ಕಂಪನಿಗೆ ಸಬ್ ಕಾಂಟ್ರ್ಯಾಕ್ಟ್ ನೀಡಲಾಗಿತ್ತು. ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಹಾಗೂ ಅಬ್ದುಲ್ ಕಲಾಂ ಎಂಬುವವರು ಈ ಕೃತ್ಯ ಎಸಗಿದ್ದಾರೆ ಎಂಬುದು ಪೊಲೀಸರ ವಿಚಾರಣೆಯಿಂದ ದೃಢಪಟ್ಟಿದೆ. ಆರೋಪಿಗಳಿಬ್ಬರಿಗೂ ಕಂಪನಿಯಿಂದ ಸಂಬಳ ಬಾಕಿ ಇತ್ತು. ಎಷ್ಟು ಕೇಳಿದರೂ ಕಂಪನಿ ಸಂಬಳ ನೀಡದಿದ್ದಕ್ಕೆ ಕೋಪಗೊಂಡಿದ್ದ ಈ ಸಿಬ್ಬಂದಿಗಳು, ಸಂಸ್ಥೆಗೆ ಮತ್ತು ಪೊಲೀಸರಿಗೆ ಪಾಠ ಕಲಿಸಲು ನಿರ್ಧರಿಸಿ ಸಿಸಿಟಿವಿ ಕೇಬಲ್‌ಗಳನ್ನು ಕತ್ತರಿಸಿದ್ದರು!
ಪಂದ್ಯದ ವೇಳೆ ಭದ್ರತೆ ಎಷ್ಟು ಮುಖ್ಯ ಎಂದು ಈ ಆರೋಪಿಗಳಿಗೆ ಚೆನ್ನಾಗಿ ತಿಳಿದಿತ್ತು. ಹಾಗಾಗಿ, ಯಾರಿಗೂ ಅನುಮಾನ ಬಾರದಂತೆ ಹೋಗಿ ಪ್ರಮುಖ ಕೇಬಲ್‌ಗಳನ್ನೇ ಕಟ್ ಮಾಡಿದ್ದರು. ಪಂದ್ಯದ ಸಂಜೆಯ ಹೊತ್ತಿಗೆ ಸಿಸಿಟಿವಿ ಫೀಡ್ ಸ್ಥಗಿತಗೊಂಡಾಗ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಕಂಗಾಲಾಗಿದ್ದರು. ಸಿಸಿಟಿವಿ ನಿಯಂತ್ರಣ ಕೊಠಡಿಯಲ್ಲಿದ್ದ ಪೊಲೀಸರು ತಪಾಸಣೆ ನಡೆಸಿದಾಗ ಕೇಬಲ್ ಕಟ್ ಆಗಿರುವುದು ಪತ್ತೆಯಾಗಿತ್ತು. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ತಾಂತ್ರಿಕ ಆಧಾರದ ಮೇಲೆ ಮಂಜುನಾಥ್ ಮತ್ತು ಅಬ್ದುಲ್ ಕಲಾಂನನ್ನು ಬಂಧಿಸಿದ್ದಾರೆ.
ಪಂದ್ಯದ ದಿನವೇ ಸಿಸಿಟಿವಿಗಳು ಆಫ್ ಆಗಿದ್ದರಿಂದ ಭದ್ರತಾ ವ್ಯವಸ್ಥೆ ಬಗ್ಗೆ ಭಾರಿ ಆತಂಕ ವ್ಯಕ್ತವಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು, ತಕ್ಷಣ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಬದಲಿ ತಾಂತ್ರಿಕ ವ್ಯವಸ್ಥೆ ಮಾಡಿದ್ದರು. ಭದ್ರತಾ ಲೋಪದ ನಡುವೆಯೂ ಪೊಲೀಸರು ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿ ನಿಭಾಯಿಸಿದ್ದರು.
ಸ್ಟೇಡಿಯಂ ಸುತ್ತಮುತ್ತ ಹಾಗೂ ಪ್ರವೇಶ ದ್ವಾರಗಳಲ್ಲಿ ಅಳವಡಿಸಿದ್ದ ಕ್ಯಾಮೆರಾಗಳು ಕಾರ್ಯನಿರ್ವಹಿಸದೇ ಇದ್ದುದರಿಂದ ಪೊಲೀಸರು ಗೊಂದಲಕ್ಕೀಡಾಗಿದ್ದರು. IPL ಪಂದ್ಯದ ದಿನ ಒಮ್ಮೆಲೇ 240 ಸಿಸಿಟಿವಿ ಕ್ಯಾಮೆರಾಗಳು ಆಪ್ ಆಗಿದ್ದು, ಇದರ ಹಿಂದೆ ಯಾರ ಕೈವಾಡವಿದೆ ಎಂದು ತನಿಖೆ ನಡೆಸಿದಾಗ ಕೇಳಿ ಬಂದಿದ್ದು ಎರಡು ಹೆಸರುಗಳು. ಐವಿಎಸ್ ಡಿಜಿಟಲ್ ಸಲ್ಯೂಷನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಮತ್ತು ಅಬ್ದುಲ್ ಕಲಾಂ. ಪಾಸ್ ಇಲ್ಲದೆ ನಿಷ್ಕ್ರಿಯಗೊಂಡ ಕಾರ್ಡ್ ಬಳಸಿ ಸರ್ವರ್ ರೂಂಗೆ ಅನಧಿಕೃತವಾಗಿ ಪ್ರವೇಶಿಸಿದ ಆರೋಪಿಗಳು ಎನ್‌ವಿಆರ್ ಮತ್ತು ಫೈಬರ್ ಸಂಪರ್ಕಗಳನ್ನು ಕಡಿತಗೊಳಿಸಿದ್ದಾರೆಂದು ವಿಚಾರಣೆಯಲ್ಲಿ ಬಹಿರಂಗವಾಗಿದೆ. ತನಿಖೆ ವೇಳೆ ಪೊಲೀಸರ ಮುಂದೆ ಬಾಯಿ ಬಿಟ್ಟ ಆರೋಪಿಗಳಿಬ್ಬರು, ಸಂಬಳ ನೀಡಿಲ್ಲವೆಂಬ ಕಾರಣಕ್ಕೆ ಕೇಬಲ್ ಕಟ್ ಮಾಡಿದೆವು ಎಂದು ಒಪ್ಪಿಕೊಂಡಿದ್ದಾರೆ.

























