ತುರ್ತು ಸಂದರ್ಭದಲ್ಲಿ ಯಶಸ್ವಿಯಾಗಿ ಸಹಜ ಹೆರಿಗೆ ಮಾಡಿಸಿದ ಸಹಪ್ರಯಾಣಿಕ ಮಹಿಳೆಯರು
ಮಂಗಳೂರು: ಚಲಿಸುತ್ತಿದ್ದ ರೈಲಿನಲ್ಲೇ ಮಹಿಳೆಯೊಬ್ಬರಿಗೆ ಹೆರಿಗೆಯಾದ ಘಟನೆ ಬಂಟ್ವಾಳ ರೈಲು ನಿಲ್ದಾಣದಲ್ಲಿ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಯಶವಂತಪುರಕ್ಕೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ಸೂಕ್ತ ವೈದ್ಯಕೀಯ ನೆರವು ಸಿಗದ ಕಾರಣ ಸಹಪ್ರಯಾಣಿಕ ಮಹಿಳೆಯರೆ ಯಶಸ್ವಿಯಾಗಿ ಸಹಜ ಹೆರಿಗೆ ಮಾಡಿಸಿದ್ದಾರೆ.
ಮೈಸೂರು ಮೂಲದ ಗರ್ಭಿಣಿಯೊಬ್ಬರು ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳುವ ರೈಲನ್ನೇರಿದ್ದರು. ರೈಲು ಬಿ.ಸಿ.ರೋಡ್ ಬಳಿ ತಲುಪುತ್ತಿದ್ದಂತೆ ಮಹಿಳೆಗೆ ತೀವ್ರ ಹೆರಿಗೆ ನೋವು ಹಾಗೂ ರಕ್ತಸ್ರಾವ ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರೈಲ್ವೆ ಸಿಬ್ಬಂದಿ ತಕ್ಷಣವೇ ರೈಲನ್ನು ಬಿ.ಸಿ ರೋಡ್ ನಿಲ್ದಾಣದಲ್ಲಿ ನಿಲ್ಲಿಸಿದರು.
ತುರ್ತು ವೈದ್ಯಕೀಯ ಚಿಕಿತ್ಸೆ ನೆರವಿಗಾಗಿ ಸುಮಾರು 30 ನಿಮಿಷಗಳ ಕಾಲ ಕಾಯಲಾಯಿತು. ಆದರೂ ಯಾವುದೇ ವೈದ್ಯಕೀಯ ನೆರವು ಸಕಾಲಕ್ಕೆ ಲಭ್ಯವಾಗಲಿಲ್ಲ. ಸಮಯ ವ್ಯರ್ಥವಾದರೆ ತಾಯಿ-ಮಗುವಿನ ಜೀವಕ್ಕೆ ಅಪಾಯವಿರುವುದನ್ನು ಅರಿತ ರೈಲಿನಲ್ಲಿದ್ದ ಇತರ ಮಹಿಳಾ ಪ್ರಯಾಣಿಕರು ತಕ್ಷಣ ಕಾರ್ಯಪ್ರವೃತ್ತರಾದರು. ರೈಲಿನ ಬೋಗಿಗೆ ಬೆಡ್‌ಶೀಟ್‌ಗಳ ಮೂಲಕ ಪರದೆ ಕಟ್ಟಿ, ತಾತ್ಕಾಲಿಕ ಹೆರಿಗೆ ಕೋಣೆಯನ್ನಾಗಿ ಪರಿವರ್ತಿಸಿದರು.
ಅನುಭವಸ್ಥ ಮಹಿಳೆಯರ ಮಾರ್ಗದರ್ಶನದಲ್ಲಿ ಜತೆ ಸೇರಿದ ಮಹಿಳೆಯರು ಹರಸಾಹಸ ಪಟ್ಟು ಗರ್ಭಿಣಿಗೆ ಸಹಜ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಮೊದಲ ಅಳು ಕೇಳುತ್ತಿದ್ದಂತೆ ರೈಲಿನಲ್ಲಿದ್ದ ಪ್ರಯಾಣಿಕರು ನಿಟ್ಟುಸಿರುಬಿಟ್ಟರು. ನಂತರ ತಾಯಿ ಮತ್ತು ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

























