ಬೆಳ್ತಂಗಡಿ : ಗರ್ಡಾಡಿಯಲ್ಲಿರುವ ಖಾಸಗಿ ಜಾಗಕ್ಕೆ ಆರೋಪಿಗಳು ಅಕ್ರಮವಾಗಿ ಪ್ರವೇಶ ಮಾಡಿ ಕೈಯಿಂದ ಮತ್ತು ಲೈಸೆನ್ಸ್ ಇಲ್ಲದ ಗನ್‌ನಿಂದ ಹಲ್ಲೆ ಮಾಡಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 8 ಮಂದಿ ಆರೋಪಿಗಳ ವಿರುದ್ಧ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಾದ ಪಿ.ಆರ್.ಮನೋಹರ ಎಂಬವರು ಏ.24ರಂದು ಮಧ್ಯಾಹ್ನ 12.30 ಗಂಟೆಗೆ ವಕೀಲೆ ಟಿಸ್ಮಿ ಮತ್ತು ಶಾಂತಲಾ ರಾಜೇಶ್ ಪ್ರಭು ಹಾಗೂ ಅವರ ಕೆಲಸದವರ ಜೊತೆಯಲ್ಲಿ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದಲ್ಲಿರುವ ಅವರ ಪಟ್ಟಾ ಜಾಗಕ್ಕೆ ಭೇಟಿ ನೀಡಿದಾಗ ಆರೋಪಿಗಳಾದ ಗೋಪ ಕುಮಾರ್, ಶ್ರೀಜಾ ಗೋಪ ಕುಮಾರ್, ಸುಮೇಶ್ ಕುಮಾರ್, ಅಂಜಿ ಸುಮೇಶ್ ಕುಮಾರ್, ರಾಮು ಯಾನೆ ಬಾಬು, ಧೂಮ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ಶಶಿರಾಜ್ ಶೆಟ್ಟಿ ಆಕ್ರಮವಾಗಿ ಪ್ರವೇಶಿಸಿ ಕೈಯಿಂದ ಹಾಗೂ ಲೈಸನ್ಸ್ ಇಲ್ಲದ ಗನ್‌ನಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮನೋಹರ್ ನೀಡಿದ ದೂರಿನ ಮೇರೆಗೆ ಏ.26ರಂದು ಆರೋಪಿಗಳಾದ ಗೋಪ ಕುಮಾರ್, ಶ್ರೀಜಾ ಗೋಪ ಕುಮಾರ್, ಸುಮೇಶ್ ಕುಮಾರ್, ಅಂಜಿ ಸುಮೇಶ್ ಕುಮಾರ್, ರಾಮು ಯಾನೆ ಬಾಬು, ಧೂಮ ಶೆಟ್ಟಿ, ರಿಷಬ್ ಶೆಟ್ಟಿ, ಶಶಿರಾಜ್ ಶೆಟ್ಟಿ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

























