ಅಪರಿಚಿತ ದುಷ್ಕರ್ಮಿಗಳಿಂದ ಕಚ್ಚಾ ಬಾಂಬ್ ದಾಳಿ
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ಸಲುವಾಗಿ ಚುನಾವಣಾ ಆಯೋಗ ಅಭೂತಪೂರ್ವ ಬಂದೋಬಸ್ತಿನ ವ್ಯವಸ್ಥೆ ಮಾಡಿದ್ದರೂ ಹಿಂಸಾಚಾರದ ಘಟನೆಗಳು ನಡೆಯುತ್ತಿವೆ. ಮತದಾನ ನಡೆಯುತ್ತಿದ್ದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಕಚ್ಚಾ ಬಾಂಬ್ ದಾಳಿ ನಡೆಸಿದ್ದಾರೆ. ಜಿಲ್ಲೆಯ ನೌಡಾದಲ್ಲಿ ಘಟನೆ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಇದು ಸ್ಥಳೀಯರಲ್ಲಿ ಭೀತಿ ಹೆಚ್ಚಿಸಿದೆ. ಬಾಂಬ್ ದಾಳಿಯ ಬಳಿಕ ಹಿಂಸಾಚಾರ ಪೀಡಿತವಾಗಿರುವ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಕಳೆದ ತಿಂಗಳು ಜಿಲ್ಲೆಯ ಜಂಗಿಪುರ ಮತ್ತು ರಘುನಾಥಗಂಜ್ ಪ್ರದೇಶಗಳಲ್ಲಿ ಎರಡು ಗುಂಪುಗಳ ನಡುವೆ ಭಾರಿ ಘರ್ಷಣೆ ನಡೆದಿತ್ತು. ಇದರಿಂದಾಗಿ ಅಧಿಕಾರಿಗಳು ನಿಷೇಧಾಜ್ಞೆ ಹೊರಡಿಸಿ 30 ಜನರನ್ನು ಬಂಧಿಸಿದ್ದರು. ಅಂದಿನಿಂದಲೂ ಕೇಂದ್ರ ಪಡೆಗಳು ಈ ಸ್ಥಳದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿವೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ಇಂದು ಮತದಾನ ನಡೆಯುತ್ತಿದೆ. ಉತ್ತರ ಬಂಗಾಳದ ಎಲ್ಲ 152 ಕ್ಷೇತ್ರಗಳಲ್ಲಿ ಮತದಾನ ಆರಂಭಗೊಂಡಿದೆ. ಉತ್ತರ ಬಂಗಾಳದ ಮುರ್ಷಿದಾಬಾದ್, ಜರ್ಗಾಮ, ಮೇದಿನಿಪುರ, ಬಂಕುರಾ, ಪುರುಲಿಯಾ, ಪಶ್ಚಿಮ ಬರ್ಧಮಾನ್ ಮತ್ತು ಬಿರ್ಬುಮ್‌ನಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದೆ.

























