ಕಾಂಗ್ರೆಸ್‌ ಶಾಸಕನ ಮನೆ ಬಾಗಿಲಿಗೆ ಬಂದ ಬಿಟ್‌ ಕಾಯಿನ್‌ ಹಗರಣದ ತನಿಖೆ

ನಲಪಾಡ್‌ ನಡೆಸಿದ ಕೋಟಿಗಟ್ಟಲೆ ವ್ಯವಹಾರದ ಮೇಲೆ ಅನುಮಾನ

ಬೆಂಗಳೂರು: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ ಮತ್ತು ಅವರ ಮಗ ಮೊಹಮ್ಮದ್‌ ನಲಪಾಡ್‌ ಮನೆ ಮತ್ತು ಕಚೇರಿಗಳ ಮೆಲೆ ದಾಳಿ ನಡೆಸುವುದರೊಂದಿಗೆ ಕರ್ನಾಟಕದಲ್ಲಿ ಕೆಲ ವರ್ಷಗಳ ಹಿಂದೆ ಭಾರಿ ಸದ್ದು ಮಾಡಿದ್ದ ಬಿಟ್‌ಕಾಯಿನ್ ಹಗರಣ ಮತ್ತೆ ಮುನ್ನೆಲೆಗೆ ಬಂದಿದೆ. ಹಗರಣದ ತನಿಖೆ ಈಗ ಕಾಂಗ್ರೆಸ್ ಎನ್.ಎ. ಹ್ಯಾರಿಸ್ ಕುಟುಂಬದ ಹೊಸ್ತಿಲಿಗೆ ಬಂದು ನಿಂತಿದೆ. ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಸಕ ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ನಿವಾಸದಗಳಲ್ಲಿ ಸತತ 15 ಗಂಟೆಗಳಿಗೂ ಹೆಚ್ಚು ಕಾಲ ಸುದೀರ್ಘ ಶೋಧ ನಡೆಸಿದ್ದಾರೆ.

ಏಪ್ರಿಲ್ 20ರ ಮುಂಜಾನೆ 6.30ಕ್ಕೆ ಏಕಕಾಲಕ್ಕೆ ಕಾರ್ಯಾಚರಣೆ ಆರಂಭಿಸಿದ ಇಡಿ ಅಧಿಕಾರಿಗಳು, ಬೆಂಗಳೂರಿನ ಒಟ್ಟು 12 ಆಯಕಟ್ಟಿನ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಅಶೋಕನಗರದಲ್ಲಿರುವ ಶಾಸಕ ಹ್ಯಾರಿಸ್ ನಿವಾಸ, ಮೊಹಮ್ಮದ್ ನಲಪಾಡ್ ನಿವಾಸ, ಬೆಳ್ಳಂದೂರಿನಲ್ಲಿರುವ ಉಮರ್ ನಲಪಾಡ್ ಕಚೇರಿ, ನಲಪಾಡ್‌ಗೆ ಸೇರಿದ ಬೆಂಗಳೂರಿನ 4 ಪ್ರತ್ಯೇಕ ಕಚೇರಿಗಳು, ವೈಟ್‌ಫೀಲ್ಡ್‌ನ ಏವಿಯೇಷನ್ ಕಂಪನಿ ಮತ್ತು ಇಲೆಕ್ಟ್ರಾನಿಕ್ ಸಿಟಿಯ ಐಟಿ ಸೆಲ್ಯುಲೋಸ್ ಸಂಸ್ಥೆಗಳು, ಹಗರಣದ ಕಿಂಗ್‌ಪಿನ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಮನೆ, ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗ ಹಕೀಬ್ ಖಾನ್ ನಿವಾಸಗಳ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಲಾಗಿದೆ.























































 
 

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಬಿಟ್‌ಕಾಯಿನ್ ಕಳವು ಮಾಡಿರುವ ಆರೋಪ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ತಂಡದ ಮೇಲಿದೆ. ಕಳುವಾದ ಡಿಜಿಟಲ್ ಆಸ್ತಿಗಳನ್ನು ಕ್ರಿಪ್ಟೋ ಮೂಲಕ ಮಾರಾಟ ಮಾಡಿ, ಆ ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಈ ಹಣವನ್ನು ಡ್ರಗ್ಸ್ ಖರೀದಿ ಮತ್ತು ವೈಯಕ್ತಿಕ ಲಾಭಕ್ಕಾಗಿ ಬಳಸಲಾಗಿದೆ ಎಂಬುದು ಇಡಿ ಅಧಿಕಾರಿಗಳ ಪ್ರಮುಖ ಆರೋಪ.

2020ರಲ್ಲಿ ಯಶೋದಾ ದೇವಿ ಎಂಬವರು ನೀಡಿದ ವಂಚನೆ ದೂರಿನ ತನಿಖೆ ವೇಳೆ ಈ ಲಿಂಕ್ ಬಯಲಾಗಿದೆ. ಹ್ಯಾಕರ್ ಶ್ರೀಕಿ, ಹ್ಯಾರಿಸ್ ಕಿರಿಯ ಪುತ್ರ ಉಮರ್ ನಲಪಾಡ್‌ನ ಕ್ಲಾಸ್‌ಮೇಟ್ ಆಗಿದ್ದ. ಇದೇ ಸ್ನೇಹದ ಮೂಲಕ ಶ್ರೀಕಿ ಮೊಹಮ್ಮದ್ ನಲಪಾಡ್‌ಗೂ ಹತ್ತಿರವಾಗಿದ್ದ. ಶ್ರೀಕಿ ಬಿಟ್‌ಕಾಯಿನ್ ಹ್ಯಾಕ್ ಮಾಡಿ ಮುಂಬೈ ಮೂಲದ ವ್ಯಕ್ತಿಯೊಬ್ಬನಿಗೆ ಕಳುಹಿಸಿದ್ದ. ಆ ವ್ಯಕ್ತಿ ನಲಪಾಡ್ ಖಾತೆಗೆ 10 ಲಕ್ಷ ರೂ. ವರ್ಗಾಯಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈ ಗುಂಪಿನ ನಡುವೆ ಒಟ್ಟು 4.5 ಕೋಟಿ ರೂ. ಅಕ್ರಮ ವಹಿವಾಟು ನಡೆದಿದೆ ಎಂಬ ಶಂಕೆಯಿದೆ.

15 ಗಂಟೆಗಳ ಕಾಲ ನಡೆದ ಶೋಧದ ನಂತರ ಇ.ಡಿ ಅಧಿಕಾರಿಗಳು ಮಹತ್ವದ ಡಿಜಿಟಲ್ ದಾಖಲೆಗಳು, ಹಾರ್ಡ್ ಡಿಸ್ಕ್, ಲ್ಯಾಪ್‌ಟಾಪ್ ಮತ್ತು ವಿದೇಶಿ ಬ್ಯಾಂಕ್ ವಹಿವಾಟಿನ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆಗೆ ಕರೆದಾಗ ಹಾಜರಾಗುವಂತೆ ಹ್ಯಾರಿಸ್ ಕುಟುಂಬಕ್ಕೆ ಸೂಚನೆ ನೀಡಲಾಗಿದೆ.

error: Content is protected !!
Scroll to Top