ಇರಾನ್‌ ಹಡಗನ್ನು ವಶಪಡಿಸಿಕೊಂಡ ಅಮೆರಿಕ : ಹಾರ್ಮುಜ್‌ನಲ್ಲಿ ಉದ್ವಿಗ್ನತೆ ಇನ್ನಷ್ಟು ಹೆಚ್ಚಳ

ಅಮೆರಿಕದ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಇರಾನ್‌ ಎಚ್ಚರಿಕೆ

ಟೆಹ್ರಾನ್‌ : ಸಂಧಾನಕ್ಕೆ ಬರುವುದಿಲ್ಲ ಎಂದು ಇರಾನ್‌ ಹೇಳಿದ ಬೆನ್ನಿಗೆ ಅಮೆರಿಕ ಸೇನೆ ಇರಾನ್ ಧ್ವಜ ಹೊಂದಿದ್ದ ಸರಕು ಹಡಗೊಂದನ್ನು ವಶಪಡಿಸಿಕೊಂಡಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ಉಲ್ಬಣಗೊಂಡಿದೆ. ಈ ಘಟನೆ ಶಾಂತಿ ಪ್ರಕ್ರಿಯೆಯನ್ನು ಸಂಪೂರ್ಣ ಹದಗೆಡಿಸಲಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

ಟೌಸ್ಕಾ ಎಂಬ ಇರಾನ್ ಹಡಗು ಓಮನ್ ಸಮುದ್ರದ ಬಳಿ ಅಮೆರಿಕ ನೌಕಾಪಡೆಯ ಎಚ್ಚರಿಕೆಗಳನ್ನು ನಿರ್ಲಕ್ಷಿಸಿತು ಎಂದು ಅಮೆರಿಕ ಆರೋಪಿಸಿದೆ. ನಂತರ ಅಮೆರಿಕ ನೌಕಾಪಡೆಯ ಡಿಸ್ಟ್ರಾಯರ್ ಹಡಗು ಅದರ ಎಂಜಿನ್ ಭಾಗಕ್ಕೆ ಗುಂಡು ಹಾರಿಸಿ ಹಡಗನ್ನು ನಿಷ್ಕ್ರಿಯಗೊಳಿಸಿ ಹಡಗನ್ನು ವಶಕ್ಕೆ ಪಡೆದು ಅದರೊಳಗಿನ ಸರಕುಗಳನ್ನು ಪರಿಶೀಲನೆ ನಡೆಸಿದೆ.























































 
 

ಈ ಸಂಪೂರ್ಣ ಕಾರ್ಯಾಚರಣೆಯ ವಿಡಿಯೋವನ್ನು ಅಮೆರಿಕ ಸೆಂಟ್ರಲ್ ಕಮಾಂಡ್ ಬಿಡುಗಡೆ ಮಾಡಿದ್ದು, ಹಲವು ಗಂಟೆಗಳ ಎಚ್ಚರಿಕೆಗಳ ನಂತರ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ. ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿರುವ ಇರಾನ್ ಸರ್ಕಾರ, ಈ ಕ್ರಮವನ್ನು ನೇರವಾಗಿ “ಸಮುದ್ರ ದರೋಡೆ” ಎಂದು ಕರೆದಿದೆ.

ಇರಾನ್ ಸೇನೆ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದು, “ಅಮೆರಿಕದ ಈ ದಾಳಿಗೆ ನಾವು ಶೀಘ್ರದಲ್ಲೇ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ” ಎಂದು ಘೋಷಿಸಿದೆ. ಈ ಹೇಳಿಕೆಗಳಿಂದಾಗಿ ಸೇನಾ ಸಂಘರ್ಷದ ಭೀತಿ ಮತ್ತಷ್ಟು ಹೆಚ್ಚಿದೆ. ಟೆಹ್ರಾನ್ ರಾಜಕೀಯ ವಲಯವೂ ಕಠಿಣ ನಿಲುವು ತೆಗೆದುಕೊಂಡಿದ್ದು, ಅಧ್ಯಕ್ಷ ಮಸೂದ್ ಪೆಜೆಷ್ಕಿಯನ್ ಅಮೆರಿಕದ ಕ್ರಮವನ್ನು ಉದ್ದೇಶಪೂರ್ವಕ ಪ್ರಚೋದನೆ ಎಂದು ಟೀಕಿಸಿದ್ದಾರೆ.

ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಅಮೆರಿಕದ ಈ ನಡೆ ರಾಜತಾಂತ್ರಿಕ ಪ್ರಯತ್ನಗಳಿಗೆ ದೊಡ್ಡ ಧಕ್ಕೆ ತರುತ್ತಿದೆ ಎಂದು ತಿಳಿಸಿದ್ದಾರೆ. ಈ ಘಟನೆ ನಡೆಯುತ್ತಿರುವುದು ಅತ್ಯಂತ ಸೂಕ್ಷ್ಮ ಸಮಯದಲ್ಲಿ. ಏಕೆಂದರೆ ಕೆಲವೇ ದಿನಗಳಲ್ಲಿ ಇರಾನ್-ಅಮೆರಿಕಾ ಶಾಂತಿ ಒಪ್ಪಂದದ ಅವಧಿ ಮುಗಿಯಲಿದ್ದು, ಹೊಸ ಮಾತುಕತೆಗಳ ಬಗ್ಗೆ ಇನ್ನೂ ಸ್ಪಷ್ಟತೆ ಮಾಹಿತಿಗಳು ಲಭ್ಯವಾಗಿಲ್ಲ.

ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಎರಡನೇ ಹಂತದ ಮಾತುಕತೆ ಕೂಡ ಅನಿಶ್ಚಿತವಾಗಿದೆ. ಇದರಿಂದ ಅಮೆರಿಕಾ-ಇರಾನ್ ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರ ಸಿಗುವ ಸಾಧ್ಯತೆಗಳು ಕುಗ್ಗುವಂತಾಗಿದೆ.

ಇದೇ ವೇಳೆ ಹಾರ್ಮಜ್ ಜಲಸಂಧಿಯಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಜಗತ್ತಿನ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಈ ಪ್ರದೇಶದಲ್ಲಿ ಇರಾನ್ ಕಠಿಣ ನಿಯಂತ್ರಣ ಹೇರಿದೆ. ಅನೇಕ ಹಡಗುಗಳು ಸಾಗಲು ಸಾಧ್ಯವಾಗದೆ ಹಿಂದಿರುಗುತ್ತಿವೆ. ಇದರಿಂದ ಜಾಗತಿಕ ತೈಲ ಪೂರೈಕೆ ಸರಪಳಿಗೆ ದೊಡ್ಡ ಹೊಡೆತ ಬಿದ್ದಿದೆ.

ಇತ್ತೀಚಿನ ದಿನಗಳಲ್ಲಿ ಇರಾನ್ ಕೆಲವು ವಾಣಿಜ್ಯ ಹಡಗುಗಳ ಮೇಲೆ ಗುಂಡು ಹಾರಿಸಿರುವ ಘಟನೆಗಳೂ ವರದಿಯಾಗಿವೆ. ಇದರಿಂದ ಸಮುದ್ರ ಮಾರ್ಗದ ಸುರಕ್ಷತೆ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ ಹೆಚ್ಚಾಗಿದೆ. ಫ್ರಾನ್ಸ್ ನಿರ್ವಹಣೆಯ ಒಂದು ಹಡಗು ಕೂಡ ಹಾನಿಗೊಳಗಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ.

ಇರಾನ್ ನಾಯಕರು ತಮ್ಮ ನಿಲುವನ್ನು ಮತ್ತಷ್ಟು ಕಠಿಣಗೊಳಿಸಿದ್ದು, ಅಮೆರಿಕ ತನ್ನ ತೈಲ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವವರೆಗೆ ಹಾರ್ಮುಜ್ ಮೂಲಕ ಸಾಗಣೆ ಮೇಲಿನ ನಿರ್ಬಂಧ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ಇದರಿಂದ ಜಾಗತಿಕ ತೈಲ ಬೆಲೆ ಏರಿಕೆ ಹಾಗೂ ಆರ್ಥಿಕ ಅಸ್ಥಿರತೆ ಹೆಚ್ಚುವ ಸಾಧ್ಯತೆ ಇದೆ.

error: Content is protected !!
Scroll to Top