ಮೆರವಣಿಗೆ ಮೇಲೆ ಹರಿದ ಕಾರು : ಬಾಲಕಿ ಸಾವು; 9 ಮಂದಿಗೆ ಗಾಯ

ಅಂಬೇಡ್ಕರ್‌ ಜಯಂತಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಸಂಭವಿಸಿದ ದುರಂತ

ಚಿಕ್ಕಮಗಳೂರು : ಅಂಬೇಡ್ಕರ್ ಜಯಂತಿ ಮೆರವಣಿಗೆ ಮೇಲೆ ಕಾರು ಹರಿದು ಬಾಲಕಿ ಮೃತಪಟ್ಟು ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಿಳೆಕಲ್ಲು ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಚಿಕ್ಕಮಗಳೂರು ತಾಲೂಕಿನ ಬಿಳೆಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ನಡೆಯುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಏಕಾಏಕಿ ಜನರ ಗುಂಪಿಗೆ ನುಗ್ಗಿ ಪಲ್ಟಿಯಾಗಿದೆ. ಈ ಘಟನೆಯು ಹಾಸನದ ಗಣಪತಿ ಮೆರವಣಿಗೆಯ ವೇಳೆ ನಡೆದಿದ್ದ ದುರಂತವನ್ನು ನೆನಪಿಸುವಂತಿದೆ. ಇಂದಾವರ ಗ್ರಾಮದಿಂದ ಬಿಳೆಕಲ್ಲು ಗ್ರಾಮದ ತನ್ನ ತಂಗಿ ಮನೆಗೆ ಹೋಗಿದ್ದ ಸಾನ್ವಿ (7) ಎಂಬ ಬಾಲಕಿ ಕಾರು ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.























































 
 

ಅಪಘಾತದಲ್ಲಿ ನಿಶ್ಚಿತ (11), ತೃಪ್ತಿ (11), ತಿಮ್ಮರಾಜು (45), ಉಷಾ (22), ಸೃಷ್ಟಿ (18), ನಾಗರಾಜು (28), ಚೇತನ್ (16) ಸೇರಿದಂತೆ ಒಟ್ಟು 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಂಟು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿದ್ದ ಸುಧಾಕರ್ ಎಂಬುವವರಿಗೂ ಗಾಯಗಳಾಗಿದ್ದು, ಅವರ ಸ್ಥಿತಿಯೂ ಗಂಭೀರವಾಗಿದೆ.

ಘಟನೆಯಿಂದ ರೊಚ್ಚಿಗೆದ್ದ ನೂರಾರು ಗ್ರಾಮಸ್ಥರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ ಮುಂಭಾಗ ಜಮಾಯಿಸಿದ್ದಾರೆ. ಗಾಯಾಳು ಕಾರು ಚಾಲಕನನ್ನು ಹಾಸನಕ್ಕೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಅನ್ನು ತಡೆದು ಆಕ್ರೋಶ ಹೊರಹಾಕಿದ್ದರಿಂದ ಆಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!
Scroll to Top