ಯುದ್ಧದ ನಡುವೆಯೇ ಭಾರತಕ್ಕೆ ತೈಲ ನೀಡಿದ ಇರಾನ್
ಮುಂಬೈ: ತೈಲ ಸಂಸ್ಕರಣಾಗಾರರಿಗೆ ಕಳೆದ ತಿಂಗಳು ಅಮೆರಿಕ (America) ನೀಡಿದ್ದ ತಾತ್ಕಾಲಿಕ ವಿನಾಯಿತಿ ಬಳಸಿಕೊಂಡು ಭಾರತ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇರಾನ್‌ನಿಂದ ಕಚ್ಚಾತೈಲ ಖರೀದಿ ಮಾಡಿದೆ. ಇರಾನಿನ ಕಚ್ಚಾತೈಲ ತುಂಬಿದ 2 ಬೃಹತ್ ಟ್ಯಾಂಕರ್‌ಗಳು ಭಾರತದ ಬಂದರುಗಳನ್ನು ತಲುಪಿವೆ ಎಂದು ಎಲ್‌ಎಸ್‌ಇಜಿ ಹಡಗು ಟ್ರ್ಯಾಕಿಂಗ್ ದತ್ತಾಂಶ ತೋರಿಸಿದೆ ಎಂದು ವರದಿಯಾಗಿದೆ.
ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ ಇರಾನ್‌ನ ಧ್ವಜ ಹೊತ್ತ ʻFelicityʼ ಹಡಗು ಪಶ್ಚಿಮ ಭಾರತದ ಸಿಕ್ಕಾ ಬಂದರನ್ನು ತಲುಪಿದೆ. ಕುರಾಕಾವೊ ಧ್ವಜ ಹೊತ್ತ ʻಜಯಾʼ ಹಡಗು ಒಡಿಶಾದ ಪೂರ್ವ ಬಂದರಿನಲ್ಲಿದೆ ಎಂದು ತಿಳಿದುಬಂದಿದೆ. VLCC (Very Large Crude Carrier) ಹಡಗು 2 ಮಿಲಿಯನ್ ಬ್ಯಾರೆಲ್ ತೈಲ ಹೊತ್ತು ತಂದಿದೆ.
ವಿಶ್ವದ 3ನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ಕೂಡ ಆಗಿರುವ ಭಾರತ ಕಚ್ಚಾತೈಲ ಖರೀದಿಸದಂತೆ ಅಮೆರಿಕ ಒತ್ತಡ ಹೇರಿತ್ತು. ಹಾಗಾಗಿ 2019ರ ಬಳಿಕ ಇರಾನ್‌ನಿಂದ ಭಾರತ ತೈಲ ಖರೀದಿ ಮಾಡಿಯೇ ಇರಲಿಲ್ಲ. ಹಾರ್ಮುಜ್ ಜಲಸಂಧಿ ಮತ್ತು ಮಧ್ಯಪ್ರಾಚ್ಯದಲ್ಲಿ ಉಂಟಾದ ಬಿಕ್ಕಟ್ಟಿನ ನಂತರ ಅಮೆರಿಕ ಏ.19ರವರೆಗೆ ನೀಡಿದ ವಿನಾಯ್ತಿ ಬಳಸಿಕೊಂಡು ತೈಲ ಖರೀದಿ ಮಾಡಿದೆ.
ದೇಶದ ಪ್ರಮುಖ ತೈಲ ಸಂಸ್ಕರಣಾ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪ್ ʻಜಯಾʼ ಹಡಗಿನಲ್ಲಿ ಬಂದ ತೈಲವನ್ನು ಖರೀದಿ ಮಾಡಿದೆ. ಇದರೊಂದಿಗೆ ವಿಶ್ವದ ಅತಿದೊಡ್ಡ ಸಂಸ್ಕರಣಾ ಘಟಕ ಹೊಂದಿರುವ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗೂ ಇರಾನ್ ತೈಲ ಖರೀದಿಸಲು ಭಾರತ ಸರ್ಕಾರ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

























