ದಾಳಿಯನ್ನು ಭೂಮಿಯಿಂದ ಸಮುದ್ರಕ್ಕೆ ವಿಸ್ತರಿಸಿದ ಬಂಡುಕೋರರು
ಇಸ್ಲಾಮಾಬಾದ್ : ಬಲೂಚಿಸ್ತಾನದ ಬಂಡುಕೋರರು ಭಾನುವಾರ ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆಯ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಕಡಲ ಪ್ರಾಧಿಕಾರದ ಹಡಗಿನ ಮೇಲೆ ನಡೆದ ಇತಿಹಾಸದ ಮೊದಲ ದಾಳಿ ಇದಾಗಿದೆ.
ಪಾಕಿಸ್ತಾನ-ಇರಾನ್ ಗಡಿಯ ಸಮೀಪವಿರುವ ಕರಾವಳಿ ಪ್ರದೇಶದಲ್ಲಿ ಕೋಸ್ಟ್ ಗಾರ್ಡ್ ದೋಣಿಯು ಎಂದಿನಂತೆ ಗಸ್ತು ತಿರುಗುತ್ತಿತ್ತು. ಈ ವೇಳೆ ದೋಣಿಯನ್ನು ಸುತ್ತುವರಿದ ಬಂಡುಕೋರರು ಮನಬಂದಂತೆ ಗುಂಡಿನ ಮಳೆ ಕರೆದಿದ್ದಾರೆ. ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ ಭದ್ರತಾ ಸಿಬ್ಬಂದಿಗೆ ಚೇತರಿಸಿಕೊಳ್ಳಲು ಸಮಯವೇ ಸಿಗಲಿಲ್ಲ. ಪರಿಣಾಮವಾಗಿ ಮೂವರು ಸೈನಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ನಿಷೇಧಿತ ಸಂಘಟನೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಈ ದಾಳಿಯ ಹೊಣೆ ಹೊತ್ತುಕೊಂಡು ಪಾಕಿಸ್ತಾನಕ್ಕೆ ಅಪಾಯದ ಎಚ್ಚರಿಕೆಯನ್ನು ನೀಡಿದೆ. ನಾವು ಇನ್ನು ಮುಂದೆ ಭೂಮಿಗೆ ಮಾತ್ರ ಸೀಮಿತವಾಗಿಲ್ಲ. ಸಮುದ್ರ ಗಡಿಗಳಲ್ಲೂ ದಾಳಿ ನಡೆಸುವುದು ನಮ್ಮ ಹೊಸ ಮಿಲಿಟರಿ ಕಾರ್ಯತಂತ್ರದ ಭಾಗವಾಗಿದೆ ಎಂದು ಬಿಎಲ್‌ಎ ಘೋಷಿಸಿದೆ. ಸಮುದ್ರದ ಮಧ್ಯದಲ್ಲಿ ದಾಳಿ ನಡೆಸುವ ಮೂಲಕ ತಾವು ಜಲಮಾರ್ಗದಲ್ಲೂ ಭದ್ರತಾ ಪಡೆಗಳಿಗೆ ಬೆದರಿಕೆ ಒಡ್ಡಬಲ್ಲೆವು ಎಂಬುದನ್ನು ಬಂಡುಕೋರರು ಸಾಬೀತುಪಡಿಸಿದ್ದಾರೆ.
ಈ ದಾಳಿ ನಡೆದ ಪ್ರದೇಶ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ವಿಶೇಷವಾಗಿ ಚೀನಾದ ‘ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್’ನ ಪ್ರಮುಖ ಭಾಗವಾಗಿರುವ ಗ್ವಾದರ್ ಆಳ ಸಮುದ್ರ ಬಂದರು ಇದೇ ಕರಾವಳಿಯಲ್ಲಿದೆ. ಕೋಸ್ಟ್ ಗಾರ್ಡ್ ಮೇಲಿನ ದಾಳಿ ಈ ಬಂದರು ಮತ್ತು ಇಲ್ಲಿ ನಡೆಯುತ್ತಿರುವ ಚೀನಾ ಮೂಲಸೌಕರ್ಯ ಯೋಜನೆಗಳ ಭದ್ರತೆಯ ಬಗ್ಗೆ ದೊಡ್ಡ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪಾಕಿಸ್ತಾನ ಸರ್ಕಾರ ಈ ದಾಳಿಯ ಹಿಂದೆ ಅಫ್ಘಾನಿಸ್ತಾನದ ಕೈವಾಡವಿದೆ ಎಂದು ಆರೋಪಿಸಿದೆ. ಬಲೂಚ್ ಉಗ್ರರಿಗೆ ಅಫ್ಘಾನಿಸ್ತಾನ ಆಶ್ರಯ ನೀಡುತ್ತಿದೆ ಮತ್ತು ಈ ದಾಳಿಗಳನ್ನು ಕಾಬೂಲ್‌ನಿಂದಲೇ ಯೋಜಿಸಲಾಗಿದೆ ಎಂದು ಇಸ್ಲಾಮಾಬಾದ್ ಹೇಳಿದೆ. ಆದರೆ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಈ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದೆ.

























