ಎಂಟು ದಶಕಗಳ ಹಾಡು ನಿಲ್ಲಿಸಿದ ಗಾಯಕಿಗೆ ಭಾವಪೂರ್ಣ ವಿದಾಯ ಕೋರಲು ಸರ್ವ ಸಿದ್ಧತೆ
ಮುಂಬೈ: ಭಾನುವಾರ ಹೃದಯಾಘಾತದಿಂದ ತೀರಿಕೊಂಡಿರುವ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ ಇಂದು ಸಂಜೆ ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ ನೆರವೇರಲಿದೆ. ಚಿತ್ರರಂಗವೂ ಸೇರಿದಂತೆ ವಿವಿಧ ರಂಗಗಳ ನೂರಾರು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಬರೋಬ್ಬರಿ 80 ವರ್ಷಗಳ ತಮ್ಮ ಗಾಯನದ ಬದುಕನ್ನು ತೊರೆದು ಹಾಡು ನಿಲ್ಲಿಸಿರುವ ಆಶಾ ಭೋಸ್ಲೆ ಅವರಿಗೆ ದೇಶ ವಿದೇಶಗಳಲ್ಲಿ ಕೋಟಿಗಟ್ಟಲೆ ಅಭಿಮಾನಿಗಳಿದ್ದಾರೆ.
ಎಂಟು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸಿನಿಮಾದ ಸಂಗೀತ ಲೋಕದ ಉಸಿರಾಗಿದ್ದ ಸ್ವರ ಸಾಮ್ರಾಜ್ಞಿ ಆಶಾ ಭೋಸ್ಲೆ 10ನೇ ವಯಸ್ಸಿಗೆ ಹಾಡಲು ಶುರು ಮಾಡಿದ್ದರು. ವಿವಿಧ ಭಾಷೆಗಳಲ್ಲಿ ಬರೋಬ್ಬರಿ 12 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. 8 ದಶಕಗಳ ಸುಂದರ ಬದುಕಿನ ಯಾನ ಮುಗಿಸಿದ ಸ್ವರ ಸಾಮ್ರಾಜ್ಞಿ ನಿನ್ನೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.
ಶನಿವಾರ ಹೃದಯ ಸ್ತಂಭನದಿಂದ ಆಶಾ ಭೋಸ್ಲೆಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಮಧ್ಯಾಹ್ನ 12 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಆಶಾ ಭೋಸ್ಲೆ ಅವರ ಮಧುರ ಧ್ವನಿಗೆ ಜಗತ್ತೇ ಮರುಳಾಗಿತ್ತು. ಅವರ ಹೆಸರು ಕೇಳುತ್ತಿದ್ದಂತೆಯೇ ತಕ್ಷಣ ನಮಗೆ ಕಿವಿಗೆ ಮಾರ್ದವ ಹಾಗೂ ಮಾದಕದ ಒಂದು ಧ್ವನಿ ಸುಳಿದು ತಾಗುತ್ತದೆ. ಅವರು ಮಧುರ ಗೀತೆಯಿಂದ ಹಿಡಿದು ಮಾದಕ ಗೀತೆಯನ್ನು ಹಾಡಿದ್ದರು. 10ನೇ ವಯಸ್ಸಿನಲ್ಲಿ ಚಲಾ ಚಲ್ ನವ್ ಬಾಲಾ ಎಂಬ ಮರಾಠಿ ಸಿನಿಮಾಗೆ ಹಾಡು ಹಾಡುವ ಮೂಲಕ ತಮ್ಮ ಗಾಯನ ಬದುಕು ಆರಂಭಿಸಿ, ನಂತರ ಹಿಂದಿರುಗಿ ನೋಡಲೇ ಇಲ್ಲ.
1950ರ ದಶಕದಲ್ಲಿ ತಮ್ಮ ಕೆರಿಯರ್‌ನ ತುತ್ತತುದಿಗೆ ಏರಿದರು. ಕಾಲಾನಂತರದಲ್ಲಿ, ಅವರು ಜಾಗತಿಕವಾಗಿ ಅತ್ಯಂತ ಪ್ರಸಿದ್ಧ ಹಿನ್ನೆಲೆ ಗಾಯಕರಲ್ಲಿ ಒಬ್ಬರಾದರು. ದಮ್ ಮಾರೋ ಧಮ್… ಯೇ ಮೇರಾ ದಿಲ್ ಪ್ಯಾರ ಕಾ ದಿವಾನಾ… ರಂಗೀಲಾರೆ ರೀತಿಯ ಮಾದಕ ಹಾಡುಗಳ ಜೊತೆ ಚುರಾಲಿಯಾ ಹೈ ತುಮ್ನೇ… ರಾಧಾ ಕೈಸೇ ನ ಜಲೆ ಯಂಥ ಮಾಧುರ್ಯ ಭರಿತ ಹಾಡುಗಳನ್ನು ಕೂಡ ದಿವ್ಯ ಕಂಠದ ಗಾಯಕಿ ಹಾಡಿದ್ದಾರೆ.
ಭಾರತದ ಗಾನಕೋಗಿಲೆ ಲತಾ ಮಂಗೇಶ್ವರ್ ಅವರ ಸಹೋದರಿ ಆಶಾ ಭೋಸ್ಲೆ. ಲತಾ ಮಂಗೇಶ್ವರ್ ಮೆಲೋಡಿ ಕ್ವೀನ್ ಅಂತ ಖ್ಯಾತಿ ಪಡೆದರೆ ಆಶಾ ಭೋಸ್ಲೆ ತಮ್ಮದೇ ಛಾಪು ಮೂಡಿಸಿದ್ದಾರೆ. ಜಗತ್ತು ಆಶಾ ಭೋಸ್ಲೆಯವರನ್ನ ಕ್ವೀನ್ ಆಫ್ ಇಂಡಿಪಾಪ್ ಎಂದು ಕರೆಯಿತು. ಅಂದ್ರೆ ಭಾರತೀಯ ಪಾಪ್ ಜಗತ್ತಿನ ರಾಣಿ ಎಂದೇ ಖ್ಯಾತಿಯನ್ನು ಆಶಾ ಪಡೆದಿದ್ದರು. ನೂರಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ಆಶಾ ಭೋಸ್ಲೆ ಅವರು ಏಳು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ, ಎರಡು ರಾಷ್ಟ್ರೀಯ ಅವಾರ್ಡ್‌ಗಳನ್ನು ಪಡೆದುಕೊಂಡಿದ್ದರು. 1981ರಲ್ಲಿ ಉಮ್ರಾವ್ ಜಾನ್ ಚಿತ್ರಕ್ಕಾಗಿ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿ ಪಡೆದರು. 1988ರಲ್ಲಿ ಇಜಾಜತ್ ಚಿತ್ರಕ್ಕಾಗಿ ತಮ್ಮ ಎರಡನೇ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. 2000ರಲ್ಲಿ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮತ್ತು 2008ರಲ್ಲಿ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪುರಸ್ಕೃತರಾಗಿದ್ದರು.
ಭೀಮಸೇನ್ ಜೋಶಿಯವರ ಹಾಡು ಅಂದ್ರೆ ಆಶಾ ಭೋಸ್ಲೆಯವರಿಗೆ ಅಚ್ಚುಮೆಚ್ಚು. ಆಶಾ ಭೋಸ್ಲೆ ಯಾವಾಗಲೂ ತಮ್ಮನ್ನು ತಾವು ನಿತ್ಯ ವಿದ್ಯಾರ್ಥಿ ಎಂದು ಕರೆದುಕೊಳ್ಳುತ್ತಿದ್ದರು. ನಾನು ಹಾಡುಗಳನ್ನು ಕೇಳಬೇಕು ಎಂದುಕೊಂಡರೆ ಪಂಡಿತ ಭೀಮಸೇನ ಜೋಷಿ ಅವರ ಹಾಡುಗಳನ್ನು ಕೇಳುತ್ತೇನೆ. ಆ ಮೂಲಕ ನಾನು ನನ್ನ ಗಾಯನದ ಸಾಮರ್ಥ್ಯವನ್ನು ಅಭ್ಯಾಸ ಮಾಡಿ ಸುಧಾರಿಸಿಕೊಳ್ಳುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಅವರಿಗೆ ಗಜಲ್‌ಗಳೆಂದ್ರೆ ಪಂಚಪ್ರಾಣ. ಅದರಲ್ಲೂ ಗುಲ್ಜಾರ್ ಅವರ ಗಜಲ್‌ಗಳು ಆಶಾ ಅವರಿಗೆ ತುಂಬಾ ಇಷ್ಟ. ಆರ್.ಡಿ ಬರ್ಮನ್ ಅವರ ಸಂಗೀತದಲ್ಲಿ ಆಶಾ ಅನೇಕ ಹಾಡುಗಳನ್ನು ಹಾಡಿದ್ದಾರೆ. ಕನ್ನಡದ ಹಾಡುಗಳಿಗೂ ಆಶಾ ಬೋಸ್ಲೆ ದನಿ ಆಗಿದ್ದಾರೆ. ಆಶಾ ಬೋಸ್ಲೆ ನಿಧನಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ, ಮಹಾರಾಷ್ಟ್ರ ಸಿಎಂ ಫಡ್ನವೀಸ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ಇಂದು ನಡೆಯುವ ಅಂತ್ಯಕ್ರಿಯೆಯಲ್ಲಿ ಸಿನಿಮಾರಂಗ, ರಾಜಕೀಯ ಸೇರಿದಂತೆ ಗಣ್ಯರು ಭಾಗಿಯಾಗಲಿದ್ದಾರೆ. ಹಾಡುಹಕ್ಕಿಯ ಅಂತಿಮ ದರ್ಶನ ಪಡೆದು ಅಲ್ವಿದಾ ಹೇಳಲಿದ್ದಾರೆ.

























