ಆತ್ಮಹತ್ಯೆ ಮಾಡಿಕೊಂಡಳೆ ಶ್ರೀನಂದಾ?

2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆಯಾದ ಬಾಲಕಿಯ ಸಾವಿನ ಸುತ್ತ ಅನುಮಾನ

ಚಿಕ್ಕಮಗಳೂರು : ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಬಂದಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ ನಿಗೂಢವಾಗಿ ನಾಪತ್ತೆಯಾದ ನಾಲ್ಕು ದಿನಗಳ ಬಳಿಕ ಪ್ರಪಾತದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿರುವ ಘಟನೆಯ ಸುತ್ತ ನಾನಾ ರೀತಿಯ ಅನುಮಾನಗಳು ಮುತ್ತಿಕೊಂಡಿವೆ. ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲೂ ತನಿಖೆ ನಡೆಯುತ್ತಿದೆ.

ಏಪ್ರಿಲ್ 7ರಂದು ಕುಟುಂಬದವರೊಂದಿಗೆ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಮಾಣಿಕ್ಯಧಾರಾಕ್ಕೆ ತಂದೆ, ತಾಯಿ ಮತ್ತು ಕುಟುಂಬದ ಸುಮಾರು 40 ಸದಸ್ಯರ ಜೊತೆಗೆ ಪ್ರವಾಸ ಬಂದಿದ್ದ 14ರ ಹರೆಯದ ಬಾಲಕಿ ಮಂಗಳವಾರ ಸಂಜೆ ಸುಮಾರು 5.30ರ ವೇಳೆ ನಿಗೂಢವಾಗಿ ನಾಪತ್ತೆಯಾಗಿದ್ದಳು. ಕುಟುಂಬದವರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ.























































 
 

ಬಳಿಕ ಅರಣ್ಯ ಇಲಾಖೆ, ಪೊಲೀಸರು, ಸೇರಿದಂತೆ ಇತರೆ ರಕ್ಷಣಾ ತಂಡಗಳು ಸತತ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದು ಅಂತಿಮವಾಗಿ ಶುಕ್ರವಾರ ಶ್ರೀನಂದಾ ಸುಮಾರು 2000 ಅಡಿ ಆಳದ ಪ್ರಪಾತದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಶ್ರೀನಂದಾ ಹೇಗೆ ಬಿದ್ದಿದ್ದಾಳೆ ಎನ್ನುವುದು ನಿಗೂಢವಾಗಿ ಉಳಿದಿದೆ.

ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರಬಹುದು ಎನ್ನಲಾಗಿತ್ತು. ಆದರೆ ತಂದೆ, ಪೊಲೀಸರ ಮುಂದೆ ಹೇಳಿರುವ ಹೇಳಿಕೆ ಶ್ರೀನಂದಾ ಸಾವಿನ ಬಗ್ಗೆ ಮತ್ತೊಂದು ಅನುಮಾನ ಮೂಡಿದ್ದು, ತಂದೆ ಬೈದಿದ್ದಕ್ಕೆ ಶ್ರೀನಂದಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಆ ದಿನ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಮಾಣಿಕ್ಯಧಾರಾದ ಮೆಟ್ಟಿಲುಗಳನ್ನು ಇಳಿಯುತ್ತಿದ್ದರು. ಕುಟುಂಬದ ಸದಸ್ಯರೆಲ್ಲಾ ಮುಂದೆ ಹೋಗುತ್ತಿದ್ದರೆ, ಬಾಲಕಿ ಶ್ರೀನಂದಾ ಅವರ ಹಿಂದೆಯೇ ಬರುತ್ತಿದ್ದಳು. ಒಂದು ತಿರುವಿನಲ್ಲಿ ನೋಡುವಾಗ ಆಕೆ ಅಲ್ಲಿರಲಿಲ್ಲ. ಕ್ಷಣಾರ್ಧದಲ್ಲಿ ಬಾಲಕಿ ದಟ್ಟ ಕಾನನದ ನಡುವೆ ನಾಪತ್ತೆಯಾದ್ದಳು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತ ಗಾಬರಿಯಿಂದ ಹುಡುಕಾಡಿದರೂ ಆಕೆಯ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆಗ ಬಾಲಕಿ ಕಾಡು ಪ್ರಾಣಿಗಳ ದಾಳಿಗೆ ಒಳಗಾಗಿದ್ದಾಳೋ ಅಥವಾ ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದಿದ್ದಾಳೋ ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದವು. ಇದೀಗ ತಂದೆ ಹೇಳಿಕೆ ಶ್ರೀನಂದಾ ಸಾವಿನ ಸುತ್ತ ಮತ್ತೊಂದು ಅನುಮಾನ ವ್ಯಕ್ತವಾಗಿದೆ.

ಮೂರು ದಿನಗಳ ಕಾಲ ನಿರಂತರ ಶೋಧ ಕಾರ್ಯಾಚರಣೆ ನಡೆದ ಬಳಿಕ ಅರಿಶಿನಗುಪ್ಪೆ ಭಾಗದಿಂದ ಹೊರಟ ಶೋಧ ತಂಡಕ್ಕೆ ಸುಮಾರು ಮೂರ್ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಆಳವಾದ ಕಂದಕದ ಬಳಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಈ ಪ್ರಪಾತವು ಸುಮಾರು 2000 ಅಡಿ ಆಳವಿದೆ. ಅತ್ಯಂತ ದುರ್ಗಮ ಪ್ರದೇಶವಾಗಿರುವ ಕಾರಣ ಶವವನ್ನು ಹೊರತೆಗೆದು ಮೇಲೆ ಎತ್ತಿಕೊಂಡು ಬರುವ ಕಾರ್ಯವೂ ಸವಾಲಿನದ್ದಾಗಿತ್ತು.

ಶ್ರೀನಂದಾ ಮೃತದೇಹ ಪತ್ತೆಯಾದ ಬಳಿಕ ಕಾಲು ಜಾರಿ ಬಿದ್ದಿರಬಹುದು ಎನ್ನಲಾಗಿತ್ತು. ತಂದೆ ರಮೇಶ್, ಮೊಬೈಲ್ ವಿಚಾರಕ್ಕೆ ಮಗಳಿಗೆ ಬೈದಿದ್ದ ಬಗ್ಗೆ ಪೊಲೀಸರ ಮುಂದೆ ಹೇಳಿದ್ದಾರೆ. ಇದರಿಂದ ಶ್ರೀನಂದಾ, ಮಾಣಿಕ್ಯಧಾರಾ ಪಾರ್ಕಿಂಗ್ ಸ್ಥಳದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕಿ ವ್ಯಕ್ತವಾಗಿದೆ.

ಶ್ರೀನಂದಾ ತಂದೆ ರಮೇಶ್ ಅವರು ಮೊಬೈಲ್ ವಿಚಾರಕ್ಕೆ ಮಗಳಿಗೆ ಬೈದಿದ್ದ ಬಗ್ಗೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ಮಾಣಿಕ್ಯಧಾರಾ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಶ್ರೀನಂದಾಗೆ ತಂದೆ ರಮೇಶ್​​ ಬೈದು ಮೊಬೈಲ್ ಕೊಡುವಂತೆ ವಾರ್ನ್​ ಮಾಡಿದ್ದರು. ಇದರಿಂದ ಮನನೊಂದು ಶ್ರೀನಂದಾ ಮಾಣಿಕ್ಯಧಾರಾದ ಫಾಲ್ಸ್​ಗೆ ತೆರಳದೆ ವಾಪಸ್ ವಾಪಸ್ ಆಗಿದ್ದಳು. ಬಳಿಕ ಶ್ರೀನಂದಾ ಕಾಣೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ತಂದೆ ಬೈದಿದ್ದಕ್ಕೆ ಚಂದ್ರದ್ರೋಣ ಪರ್ವತದ ಮಾಣಿಕ್ಯಧಾರಾ ಪಾರ್ಕಿಂಗ್ ಸ್ಥಳದಿಂದ ಜಿಗಿದಿರಬಹುದು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top