ಮಂಗಳೂರು: ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಆರಿಫ್ ಕೊಲೆ ಪ್ರಕರಣವನ್ನು ಸಿಸಿಬಿ ಪೊಲೀಸರು ಬೇಧಿಸಿದ್ದು, ಕೃತ್ಯಕ್ಕೆ ಸಂಬಂಧಿಸಿದ ಹಾಗೆ ಪ್ರಮುಖ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಾ. 27 ರಂದು ಆರಿಫ್ ಕೊಲೆ ನಡೆದಿದ್ದು ಆರೋಪಿಗಳಾದ ರಿಫತ್, ಜುಟ್ಟು ಅಶ್ಪಾಕ್, ಖಲೀಲ್, ಶಾಖಿರ್, ಇರ್ಫಾನ್, ರಿಜ್ವಾನ್‌ನನ್ನು ಬಂಧಿಸಲಾಗಿದೆ. ಇವರುಗಳು ಆರಿಫ್ ಬೈಕ್ ಅನ್ನು ಇನ್ನೋವಾ ಕಾರಿನಲ್ಲಿ ಹಿಂಬಾಲಿಸಿ ಬಳಿಕ ಢಿಕ್ಕಿ ಹೊಡೆದು ಕೆಳಕ್ಕೆ ಉರುಳಿಸಿದ್ದಾರೆ. ಆ ಬಳಿಕ ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಯಾವುದೇ ಸುಳಿವುಗಳನ್ನೂ ಬಿಡದೆ ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಘಟನೆ ಪೂರ್ವಯೋಜಿತಕೃತ್ಯ ಎಂಬುದು ಸಹ ತನಿಖೆಯ ವೇಳೆ ದೃಢಪಟ್ಟಿದೆ. ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಕೊಲೆಯ ಸಂಚು, ಕಾರ್ಯಗತಗೊಳಿಸಿದ ರೀತಿ, ಅದಕ್ಕೆ, ನೆರವು ನೀಡಿದವರ ಮಾಹಿತಿ ಎಲ್ಲವನ್ನೂ ಕಲೆ ಹಾಕಿದ್ದಾರೆ.
ಕೊಲೆ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಒಂದು ವ್ಯವಸ್ಥಿತ ಜಾಲ ಕೆಲಸ ಮಾಡಿರುವುದು ಸಹ ತಿಳಿದು ಬಂದಿದೆ.
ಇರ್ಷಾದ್ ಎಂಬಾತ ಕೊಲೆಗೂ ಮುನ್ನ ಆರೋಪಿಗಳಿಗೆ ತಂಗಲು ವಸತಿ ಕಲ್ಪಿಸಿದ್ದಲ್ಲದೆ, ಕೃತ್ಯ ನಡೆಸಿದ ಸ್ಥಳಕ್ಕೆ ತೆರಳಲು ವಾಹನದ ವ್ಯವಸ್ಥೆ ಕೂಡ ಮಾಡಿದ್ದಾನೆ. ಸುಹೈಲ್ ಎಂಬಾತ ಕೊಲೆಗೆ ಬಳಸಲಾದ ಬಾಡಿಗೆ ಇನ್ನೋವಾ ವಾಹನವನ್ನು ವ್ಯವಸ್ಥೆಗೊಳಿಸಿ, ರಿಫತ್‌ಗೆ ಹಸ್ತಾಂತರಿಸಿದ್ದು ಬಳಿಕ ತಕ್ಷಣ ಸೌದಿ ಅರೇಬಿಯಾಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿತೂರಿಯಲ್ಲಿ ಆರೋಪಿ ಅರ್ಷಾದ್‌ನ ಪಾತ್ರವೂ ಮಹತ್ವದ್ದಾಗಿದೆ. ಇವನು ಕೊಲೆಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದಲ್ಲದೆ, ಪೊಲೀಸರ ಚಲನವಲನಗಳನ್ನು ನಿರಂತರವಾಗಿ ಗಮನಿಸಿ, ಆರೋಪಿಗಳಿಗೆ ನೈಜ-ಸಮಯದ ಮಾಹಿತಿಗಳನ್ನು ಒದಗಿಸಿದ್ದಾನೆ. ಅಲ್ಲದೆ, ಆರೋಪಿಗಳು ತಲೆಮರೆಸಿಕೊಂಡಿದ್ದಾಗ ವಾಹನ ಮತ್ತು ಹಣಕಾಸಿನ ನೆರವನ್ನೂ ಇವನೇ ಒದಗಿಸಿರುವುದು ದೃಢಪಟ್ಟಿದೆ.
ಪೊಲೀಸರ ಕಣ್ಣಾವಲಿನಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನೂ ಬಳಸಿಕೊಂಡಿದ್ದಾರೆ. ಹಿಂದಿನ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಅಶ್ವಿರ್, ಈ ಪ್ರಕರಣದ ಆರೋಪಿಗಳಿಗೆ ತಾಂತ್ರಿಕ ನೆರವು ನೀಡಿದ್ದಾನೆ. ಇವನು ಆರೋಪಿಗಳಿಗೆ ದುಬೈನ ಒಟಿಪಿ (ಒಂದು ಬಾರಿ ಪಾಸ್‌ವರ್ಡ್) ಗಳನ್ನು ಒದಗಿಸಿ. ಅಂತರರಾಷ್ಟ್ರೀಯ ವಾಟ್ಸ್ಆ್ಯಪ್ ಖಾತೆಗಳನ್ನು ಇಲ್ಲಿ ಬಳಸಲು ಸಹಕರಿಸಿದ್ದಾನೆ.
ಮಾಹಿತಿ ಪೊಲೀಸರಿಗೆ ಸಿಕ್ಕಿ ಅದನ್ನು ಟವರ್ ಟ್ರ್ಯಾಕ್ ಮಾಡಲು ಆರಂಭಿಸಿದಾಗ, ಅಶ್ವಿರ್ ಹಂತಕರಿಗೆ ತಕ್ಷಣವೇ ಹೊಸ ಸಂಪರ್ಕ ವಿವರಗಳನ್ನು ಒದಗಿಸಿ, ಆರೋಪಿಗಳ ಸಂವಹನಕ್ಕೆ ಅಡ್ಡಿಯಾಗದಂತೆ ನೋಡಿಕೊಂಡಿದ್ದಾನೆ. ಅಲ್ಲದೆ, ಮುಸ್ತಫಾ ಮತ್ತು ಅಶ್ವರ್, ವಿದೇಶದಿಂದ ಕಾರ್ಯನಿರ್ವಹಿಸುತ್ತಾ. ಆರೋಪಿಗಳು ತಲೆಮರೆಸಿಕೊಂಡಿದ್ದಾಗ ಅವರ ಪ್ರಯಾಣ, ವಸತಿ ಮತ್ತು ಇತರ ಖರ್ಚುಗಳಿಗೆ ಹಣಕಾಸಿನ ನೆರವು ನೀಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ.
ಸದ್ಯ, ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಆರು ದಾಳಿಕೋರರು ಮತ್ತು ಇರ್ಷಾದ್ ಸೇರಿದಂತೆ ಒಟ್ಟು ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿಚಾರಣೆಯಿಂದ ಕೊಲೆಯ ಹಿಂದಿರುವ ಇತರ ಪಾತಕಿಗಳ ಜಾಲದ ಬಗ್ಗೆ ಇನ್ನಷ್ಟು ಸುಳಿವುಗಳು ಲಭ್ಯವಾಗುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕೊಲೆಯ ಸಂಚು ಇನ್ನೂ ದೊಡ್ಡ ಪ್ರಮಾಣದಲ್ಲಿದೆ ಎಂದು ಪೊಲೀಸರು ಶಂಕಿಸಿದ್ದು, ಉಳಿದ ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಸಹಚರರನ್ನು ಗುರುತಿಸಲು ತನಿಖೆ ಮುಂದುವರಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿಚಾರಣೆಗಳು ಪ್ರಕರಣದ ಸಂಪೂರ್ಣ ಸತ್ಯಾಂಶವನ್ನು ಹೊರಹಾಕುವ ನಿರೀಕ್ಷೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

























