ಶಬರಿಮಲೆ ವಿವಾದ : 9 ನ್ಯಾಯಾಧೀಶರ ಸಂವಿಧಾನದ ಪೀಠದಲ್ಲಿ ವಿಚಾರಣೆ ಆರಂಭ

ಮಹಿಳೆಯರಿಗೆ ದೇವಳ ಪ್ರವೇಶ ನೀಡುವ ವಿಚಾರವಾಗಿ ವಾದ-ಪ್ರತಿವಾದ ಮಂಡನೆ

ನವದೆಹಲಿ: ಕೇರಳಂನ ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡಿದ ತೀರ್ಪಿನ ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆರಂಭಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ 9 ನ್ಯಾಯಾಧೀಶರ ಸಂವಿಧಾನ ಪೀಠ ವಿಚಾರಣೆಯಲ್ಲಿ ಪೀಠವು 7 ಪ್ರಶ್ನೆಗಳನ್ನು ಎತ್ತಿದೆ.

ಪ್ರಕರಣದಲ್ಲಿ ವಾದ ಮಂಡಿಸುವ ವಕೀಲರು ನಿಗದಿತ ಗಡುವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇನ್ನೂ ಅನೇಕ ಸೂಕ್ಷ್ಮ ಪ್ರಕರಣಗಳು ಬಾಕಿ ಉಳಿದಿವೆ. ಆದ್ದರಿಂದ ಹೆಚ್ಚುವರಿ ಸಮಯ ನೀಡಲಾಗುವುದಿಲ್ಲ. ಎಲ್ಲ ಪಕ್ಷಗಳು ತಮ್ಮ ವಾದಗಳು ಮತ್ತು ದಾಖಲೆಗಳನ್ನು ಸಕಾಲಿಕವಾಗಿ ಪ್ರಸ್ತುತಪಡಿಸಲು ಆದೇಶಿಸಿದೆ.























































 
 

ವಿಚಾರಣೆಗೂ ಮುನ್ನ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ್ದು ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವು ತಾರತಮ್ಯವಲ್ಲ, ಬದಲಿಗೆ ಅದು ಶಬರಿಮಲೆಯ ವಿಶಿಷ್ಟ ಧಾರ್ಮಿಕ ಸಂಪ್ರದಾಯ ಮತ್ತು ಪಂಥೀಯ ಸ್ವಾಯತ್ತತೆಯ ವ್ಯಾಪ್ತಿಗೆ ಬರುತ್ತದೆ. ಧಾರ್ಮಿಕ ಆಚರಣೆಗಳಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಸರಿಯಲ್ಲ. ಮಹಿಳೆಯರಿಗೆ ಪ್ರವೇಶ ನಿರಾಕರಿಸುವ ಈ ಪದ್ಧತಿ ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ. ಇದು ಲಿಂಗ ತಾರತಮ್ಯಕ್ಕಿಂತ ಧಾರ್ಮಿಕ ಸಂಪ್ರದಾಯದ ವಿಷಯವಾಗಿದೆ. ಮಹಿಳೆಯರ ಪ್ರವೇಶವನ್ನು ಅನುಮತಿಸುವುದರಿಂದ ದೇವಾಲಯದಲ್ಲಿ ಪೂಜೆಯ ಸ್ವರೂಪವನ್ನು ಮೂಲಭೂತವಾಗಿ ಬದಲಾಯಿಸಬಹುದು ಮತ್ತು ದೀರ್ಘಕಾಲದ ಸಂಪ್ರದಾಯಗಳನ್ನು ದುರ್ಬಲಗೊಳಿಸಬಹುದು. ಈ ಪದ್ಧತಿಯನ್ನು ಬದಲಾಯಿಸುವುದರಿಂದ ಶತಮಾನಗಳಿಂದ ಸ್ಥಾಪಿತ ಪದ್ಧತಿಗಳನ್ನು ಅನುಸರಿಸುತ್ತಿರುವ ಪುರುಷರು ಮತ್ತು ಮಹಿಳೆಯರು ಇಬ್ಬರೂ ಭಕ್ತರ ಧಾರ್ಮಿಕ ಹಕ್ಕುಗಳ ಮೇಲೆ ಉಲ್ಲಂಘನೆಯಾಗುತ್ತದೆ. ಧಾರ್ಮಿಕ ಬಹುತ್ವದ ಸಾಂವಿಧಾನಿಕ ತತ್ವದ ಮೇಲೆ ಪರಿಣಾಮ ಬೀರಬಹುದು ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿದ್ದಾರೆ.

2018ರಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡಬೇಕೆಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಈಗ ಸಮಗ್ರ ವಿಚಾರಣೆ ನಡೆಯುತ್ತಿದೆ. ಕೇರಳಂ ಸರ್ಕಾರ ಈ ಮೊದಲು ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಹೇಳಿತ್ತು. ಆದರೆ ಈಗ ಮಹಿಳೆಯರಿಗೆ ಅವಕಾಶ ನೀಡಬಾರದು ಎಂದು ಕೋರಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ.

error: Content is protected !!
Scroll to Top