ಇರಾನ್‌-ಅಮೆರಿಕ ತಾತ್ಕಾಲಿಕ ಕದನ ವಿರಾಮ

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ

ವಾಷಿಂಗ್ಟನ್‌: ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ ಮತ್ತು ಇರಾನ್‌ ನಡುವೆ 2 ವಾರಗಳ ಕದನ ವಿರಾಮ ಘೋಷಣೆಯಾಗಿದೆ. ಇರಾನ್‌ಗೆ ನೀಡಿದ್ದ 48 ಗಂಟೆಗಳ ಡೆಡ್‌ಲೈನ್‌ ಅಮೆರಿಕ ಕಾಲಮಾನ ರಾತ್ರಿ 8 ಗಂಟೆಗೆ ಅಂತ್ಯವಾಗುವ ಒಂದು ಗಂಟೆಯ ಮೊದಲು ಟ್ರಂಪ್‌ ತಮ್ಮ ಟ್ರೂಥ್‌ ಸೋಷಿಯಲ್‌ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಯುದ್ಧದ ಕಿಚ್ಚು ಸದ್ಯಕ್ಕೆ ತಣ್ಣಗಾಗಿದ್ದು, ಜಗತ್ತು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಇರಾನ್‌ ಒಪ್ಪಿಕೊಂಡಿದೆ ಮತ್ತು ಅವರ ಕಡೆಯಿಂದ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಇಂದು ರಾತ್ರಿ ಇರಾನ್‌ಗೆ ಕಳುಹಿಸಲಾಗುತ್ತಿರುವ ವಿನಾಶಕಾರಿ ಪಡೆಗಳನ್ನು ತಡೆಹಿಡಿಯುವಂತೆ ಮನವಿ ಮಾಡಿದರು.























































 
 

ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಈ ಕೂಡಲೇ ತೆರೆಯಲು ಒಪ್ಪಿಕೊಂಡರೆ ಇರಾನ್‌ ಮೇಲೆ ಮಾಡಲು ಉದ್ದೇಶಿಸಿರುವ ಬಾಂಬ್‌ ದಾಳಿಯನ್ನು ಎರಡು ವಾರಗಳ ಕಾಲ ತಡೆ ಹಿಡಿಯಲು ಒಪ್ಪಿಗೆ ನೀಡುತ್ತೇನೆ. ಇದು ದ್ವಿಪಕ್ಷೀಯ ಕದನ ವಿರಾಮ ಆಗಲಿದೆ. ಈಗಾಗಲೇ ನಾವು ಎಲ್ಲ ಮಿಲಿಟರಿ ಉದ್ದೇಶಗಳನ್ನು ಪೂರೈಸಿದ್ದೇವೆ ಮತ್ತು ಮೀರಿದ್ದೇವೆ. ಇರಾನ್‌ನೊಂದಿಗೆ ದೀರ್ಘಾವಧಿಯ ಶಾಂತಿ ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿಗೆ ಸಂಬಂಧಿಸಿದ ನಿರ್ಣಾಯಕ ಒಪ್ಪಂದದೊಂದಿಗೆ ಬಹಳ ದೂರದಲ್ಲಿದ್ದೆವು ಎಂದು ಟ್ರಂಪ್‌ ಹೇಳಿದ್ದಾರೆ.

ಇರಾನ್‌ ಕಡೆಯಿಂದ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದ್ದು, ಇದು ಶಾಶ್ವತ ಶಾಂತಿ ಮಾತುಕತೆಗೆ ಉತ್ತಮ ಆಧಾರವಾಗಿದೆ. ಈ ಎರಡು ವಾರಗಳ ಸಮಯವು ಇರಾನ್ ಮತ್ತು ಅಮೆರಿಕದ ನಡುವೆ ದೀರ್ಘಕಾಲದ ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಲು ಮತ್ತು ಪೂರ್ಣಗೊಳಿಸಲು ಸಹಕಾರಿಯಾಗಲಿದೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಪರವಾಗಿ, ಅಧ್ಯಕ್ಷರಾಗಿ, ಮತ್ತು ಮಧ್ಯಪ್ರಾಚ್ಯ ದೇಶಗಳನ್ನು ಪ್ರತಿನಿಧಿಸುತ್ತಾ, ಈ ದೀರ್ಘಕಾಲೀನ ಸಮಸ್ಯೆ ಪರಿಹಾರದ ಹಂತಕ್ಕೆ ಬಂದಿರುವುದು ಗೌರವದ ಸಂಗತಿ ಎಂದು ಟ್ರಂಪ್‌ ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಸಮ್ಮತಿ

ಐದು ವಾರಗಳಿಂದ ನಡೆಯುತ್ತಿದ್ದ ಯುದ್ಧ ಜಗತ್ತಿನ ತೈಲ ಪೂರೈಕೆಯ ನಾಡಿಮಿಡಿತವಾದ ‘ಹಾರ್ಮುಜ್ ಜಲಸಂಧಿ’ಯನ್ನು ಬಂದ್ ಮಾಡಿತ್ತು. ಈಗ ಇರಾನ್ ಈ ಜಲಸಂಧಿಯನ್ನು ತಕ್ಷಣವೇ ಮತ್ತು ಸುರಕ್ಷಿತವಾಗಿ ತೆರೆಯಲು ಒಪ್ಪಿಕೊಂಡಿದೆ. ಟ್ರಂಪ್ ಈ ಹಿಂದೆ ಇರಾನ್‌ನ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದರು, ಇದು ಯುದ್ಧಾಪರಾಧವಾಗಬಹುದು ಎಂದು ವಿಶ್ವಸಂಸ್ಥೆ ಮತ್ತು ಪೋಪ್ ಕೂಡ ಆತಂಕ ವ್ಯಕ್ತಪಡಿಸಿದ್ದರು. ಆದರೆ ಈಗ ಇರಾನ್ ನೀಡಿರುವ 10 ಅಂಶಗಳ ಪ್ರಸ್ತಾವನೆಯ ಆಧಾರದ ಮೇಲೆ ಶಾಂತಿ ಮಾತುಕತೆ ನಡೆಸಲು ಅಮೆರಿಕ ಮುಂದಾಗಿದೆ. ಇಸ್ರೇಲ್ ಕೂಡ ಈ ಕದನ ವಿರಾಮಕ್ಕೆ ಬೆಂಬಲ ಸೂಚಿಸಿದೆ ಎಂದು ವರದಿಯಾಗಿದೆ.

ಇರಾನ್​​ನ 10 ಅಂಶಗಳ ಪ್ರಸ್ತಾವನೆ

*ಆಕ್ರಮಣಶೀಲತೆ ಮಾಡದಿರುವ ವಿಚಾರದಲ್ಲಿ ಬದ್ಧತೆ
*ಹೊರ್ಮುಝ್​ ಮೇಲೆ ಇರಾನ್​​ ನಿಯಂತ್ರಣ ಮುಂದುವರಿಕೆ
*ಯುರೇನಿಯಂ ಪುಷ್ಟೀಕರಣದ ಸ್ವೀಕಾರ
*ಎಲ್ಲ ಪ್ರಾಥಮಿಕ ಮತ್ತು ದ್ವಿತೀಯ ನಿರ್ಬಂಧ ತೆರವು
*ವಿಶ್ವಸಂಸ್ಥೆ ಭದ್ರತಾ ಮಂಡಳಿ ಮತ್ತು ಐಇಎಇ ಆಡಳಿತ ಮಂಡಳಿಯ ನಿರ್ಣಯ ರದ್ದು
*ಜಲಸಂಧಿ ಆದಾಯ ಮೂಲಸೌಕರ್ಯ ಪುನರ್​ನಿರ್ಮಾಣಕ್ಕೆ ಬಳಕೆ
*ಇರಾನ್‌ಗೆ ನಷ್ಟ ಪರಿಹಾರ
*ಅಮೆರಿಕ ಯುದ್ಧ ಪಡೆಗಳನ್ನು ಹಿಂತೆಗೆದುಕೊಳ್ಳುವುದು
*ಎಲ್ಲ ರೀತಿಯ ಯುದ್ಧ ನಿಲ್ಲಿಸುವುದು
*ಲೆಬನಾನ್​ ಮೇಲೆ ಇಸ್ರೇಲ್​ ದಾಳಿ ನಿಲ್ಲಿಸಬೇಕು

ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಸಂದೇಶ

ಇರಾನ್ ಪರವಾಗಿ ಈ ಪ್ರದೇಶದಲ್ಲಿ ಯುದ್ಧವನ್ನು ಕೊನೆಗೊಳಿಸಲು ಅವಿಶ್ರಾಂತ ಪ್ರಯತ್ನ ಮಾಡಿದ್ದಕ್ಕಾಗಿ ಪಾಕಿಸ್ತಾನದ ಪ್ರಧಾನಿ ಷರೀಫ್ ಹಾಗೂ ಫೀಲ್ಡ್ ಮಾರ್ಷಲ್ ಮುನೀರ್ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. 15 ಅಂಶಗಳ ಪ್ರಸ್ತಾವನೆಯ ಆಧಾರದ ಮೇಲೆ ಮಾತುಕತೆಗಾಗಿ ಅಮೆರಿಕದ ವಿನಂತಿಯನ್ನು ಮತ್ತು ಇರಾನ್‌ನ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸುವ ಬಗ್ಗೆ ಅಮೆರಿಕ ಅಧ್ಯಕ್ಷರು ಮಾಡಿದ ಘೋಷಣೆಯನ್ನು ಪರಿಗಣಿಸಿ ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಪರವಾಗಿ ನಾನು ಈ ಮೂಲಕ ಘೋಷಣೆ ಮಾಡುತ್ತಿದ್ದೇನೆ ಎಂದು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಅವರು ಸಂದೇಶ ಬಿಡುಗಡೆ ಮಾಡಿದ್ದಾರೆ.

ಇರಾನ್ ವಿರುದ್ಧದ ದಾಳಿಗಳನ್ನು ಅಮೆರಿಕ ನಿಲ್ಲಿಸಿದರೆ, ನಮ್ಮ ಪ್ರಬಲ ಸಶಸ್ತ್ರ ಪಡೆಗಳು ತಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ನಿಲ್ಲಿಸುತ್ತವೆ. ಎರಡು ವಾರಗಳ ಅವಧಿಗೆ ಇರಾನ್‌ನ ಸಶಸ್ತ್ರ ಪಡೆಗಳೊಂದಿಗೆ ಸಮನ್ವಯದ ಮೂಲಕ, ತಾಂತ್ರಿಕ ಮಿತಿಗಳನ್ನು ಪರಿಗಣಿಸಿ ಹೊರ್ಮುಜ್ ಜಲಸಂಧಿ ಮೂಲಕ ಸುರಕ್ಷಿತ ಸಂಚಾರ ಸಾಧ್ಯವಾಗುತ್ತದೆ ಎಂದು ಸೈಯದ್ ಅಬ್ಬಾಸ್ ಅರಾಘ್ಚಿ ತಿಳಿಸಿದ್ದಾರೆ.

error: Content is protected !!
Scroll to Top