ಹನಿಟ್ರ್ಯಾಪ್ ಆರೋಪ ಸುಳ್ಳು ಎಂದ ಸೌಮ್ಯಾ ಶೆಟ್ಟಿ
ಉಡುಪಿ: ನೆಲ್ಯಾಡಿ ಮೂಲದ ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸುದೀಪ್ ರೈ ಅವರ ಪತ್ನಿ ಸೌಮ್ಯ ಶೆಟ್ಟಿ ಮಾಧ್ಯಮಗಳ ಮುಂದೆ ಬಂದು ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಸೌಮ್ಯ ಶೆಟ್ಟಿ, ನನ್ನ ವಿರುದ್ಧ ಕೇಳಿಬರುತ್ತಿರುವ ಹನಿಟ್ರ್ಯಾಪ್ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ನಿರಾಧಾರ. ನನ್ನ ವ್ಯಕ್ತಿತ್ವ ತೇಜೋವಧೆ ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ. ಸುದೀಪ್ ತಮ್ಮ ತಂದೆಯ ಮನೆಗೆ ತೆರಳಿದ್ದ ಸಮಯದಲ್ಲೇ ಈ ದುರ್ಘಟನೆ ಸಂಭವಿಸಿದೆ. ಈ ವಿಚಾರದಲ್ಲಿ ನನ್ನನ್ನು ಬಂಧಿಸುವುದು ನ್ಯಾಯಸಮ್ಮತವಲ್ಲ. ಘಟನೆಗೆ ಸಂಬಂಧಿಸಿದ ಎಲ್ಲಾ ಅಂಶಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಸುದೀಪ್ ಪೋಷಕರು ಹೇಳುವಂತೆ ನೆಲ್ಯಾಡಿಯಲ್ಲಿ ನಾನು ರಂಪಾಟ ಮಾಡಿಲ್ಲ. ವಿಷ ಹಾಕಿ ಸುದೀಪ್ರನ್ನು ಕೊಂದಿಲ್ಲ. ಬದಲಾಗಿ ಮನೆಯವರ ಕಿರುಕುಳದಿಂದಲೇ ಸುದೀಪ್ ಆತ್ಮಹತ್ಯೆ ಮಾಡಿಕೊಂಡಿರಬಹುದು. ಸುದೀಪ್ ಮೊಬೈಲ್ ಸಂಪರ್ಕಕ್ಕೆ ಸಿಗದ ಕಾರಣ ಆತಂಕಗೊಂಡು ತಾನು ನೆಲ್ಯಾಡಿಗೆ ತೆರಳಿದ್ದೆ. ಅವರು ಹೇಳುವಂತೆ ತಾನು ಯಾವುದೇ ರಂಪಾಟ ನಡೆಸಿಲ್ಲ. ಬೇಕಿದ್ದರೆ ಸಿಸಿ ಕ್ಯಾಮರಾ ದೃಶ್ಯಾವಳಿಗಳ ಪರಿಶೀಲನೆ ಮಾಡಿ. ಸುದೀಪ್ ತಾಯಿ ನನಗೆ ಕೆಟ್ಟ ಭಾಷೆಯಲ್ಲಿ ಬೈದ ಕಾರಣ ಆ ವೇಳೆ ನಾನು ಕಿರುಚಾಡಿದ್ದು ನಿಜ. ನಮ್ಮ ಮನೆಯಲ್ಲಿಯೇ ಇದ್ದ ಸುದೀಪ್ ಮಾರ್ಚ್ 16ರಂದು ನೆಲ್ಯಾಡಿಗೆ ತೆರಳಿದ್ದರು. ತಂದೆಯ ಮನೆಗೆ ಹೋದ ನಂತರ ನನಗೆ ಸಮಸ್ಯೆ ಆಗಿದೆ. ನನ್ನ ಮನೆಯಲ್ಲಿ ಮದುವೆಗೆ ಒಪ್ಪುತ್ತಿಲ್ಲ ಎಂದಿದ್ದರು. ಒಂದು ವೇಳೆ ಅವರು ಒಪ್ಪದಿದ್ದರೆ ನಿಮ್ಮ ಮನೆಯಲ್ಲಿ ಒಪ್ಪುತ್ತಾರಲ್ಲ ಎಂದು ಕೇಳಿದ್ದರು. ತಂದೆಯ ಮನೆಗೆ ಹೋಗಿ ಬಂದ ನಂತರ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಅವರ ಮನೆಯವರೇ ಆತ್ಮಹತ್ಯೆಗೆ ಪ್ರಚೋದನೆ ನೀಡಿರಬೇಕು ಎಂದು ಸೌಮ್ಯಾ ಆರೋಪಿಸಿದ್ದಾರೆ.
ಪ್ರಕರಣದಲ್ಲಿ ಉಲ್ಲೇಖವಾಗುತ್ತಿರುವ ವೇಣುಗೋಪಾಲ್ ಶೆಟ್ಟಿ ಕುರಿತು ಮಾತನಾಡಿ, ವೇಣುಗೋಪಾಲ್ ಶೆಟ್ಟಿ ನನ್ನ ವಿರುದ್ಧ ಪೂರ್ವಗ್ರಹದಿಂದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಜೊತೆ ಮದುವೆಯಾಗುವ ವಿಚಾರವನ್ನು ನಾನು ನಿರಾಕರಿಸಿದ್ದೆ. ಕಾರಣ ಅವರು ಬೇರೆ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ ವಿಚಾರ ನನಗೆ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲೇ ಅವರು ವೈಯಕ್ತಿಕ ದ್ವೇಷದಿಂದ ಈ ಪ್ರಕರಣವನ್ನು ಬಳಸಿಕೊಂಡು ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ. ನನ್ನ ಹೆಸರನ್ನು ಕೆಡಿಸಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.
ಈ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿರುವುದಾಗಿ ಸೌಮ್ಯ ಶೆಟ್ಟಿ ತಿಳಿಸಿದರು. ಜೊತೆಗೆ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೂ ಸಂಪೂರ್ಣ ವಿಷಯವನ್ನು ವಿವರಿಸಿ ನ್ಯಾಯಯುತ ಕ್ರಮಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ. ನನ್ನ ಮೇಲೆ ಮಾಡಲಾಗುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು. ನನಗೆ ನ್ಯಾಯ ದೊರಕಬೇಕು ಎಂದು ಸೌಮ್ಯ ಶೆಟ್ಟಿ ಒತ್ತಾಯಿಸಿದ್ದಾರೆ.

























