ಬೆಳ್ತಂಗಡಿ : ಕಳಿಯ ಗ್ರಾಮದ ಗೇರುಕಟ್ಟೆ ಸಮೀಪ ಮಾ.31ರಂದು ಬೆಳಗ್ಗೆ ಚಲಿಸುತ್ತಿದ್ದ ಬಸ್ಸಿನ ಬಾಗಿಲು ತೆರೆದು ವಿದ್ಯಾರ್ಥಿನಿಯರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡ ಘಟನೆಗೆ ಸಂಬಂಧಿಸಿ ಬಸ್ಸಿನ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳಿಯದಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಅದರ ಚಾಲಕ ದಯಾನಂದ ಅತ್ಯಂತ ಅಜಾಗರೂಕತೆಯಿಂದ ಚಲಾಯಿಸಿದ್ದು ನಿರ್ವಾಹಕ ಕಾಶಿನಾಥ್ ಬಸ್ಸಿನ ಬಾಗಿಲು ಸರಿಯಾಗಿ ಹಾಕದೆ ಅಜಾಗರೂಕತೆಯಿಂದ ಇದ್ದ ಕಾರಣದಿಂದಾಗಿ ಚಲಿಸುತ್ತಿದ್ದ ಬಸ್ಸಿನ ಬಾಗಿಲು ತೆರೆದು ಸಹೋದರಿಯರಾದ ಚರಿಷ್ಮಾ(17) ಮತ್ತು ಚದ್ಮಿಕಾ(15) ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಅಪಘಾತಕ್ಕೆ ಕಾರಣರಾದ ಚಾಲಕ ಹಾಗೂ ನಿರ್ವಾಹಕನ ವಿರುದ್ದ ಗಾಯಗೊಂಡ ವಿದ್ಯಾರ್ಥಿನಿ ಚರಿಷ್ಮಾ(17) ನೀಡಿದ ದೂರಿನ ಮೇರೆಗೆ ಕಲಂ 281,125,125(a) ಬಿಎನ್ ಎಸ್ ಅಡಿಯಲ್ಲಿ ಮಾ.31 ರಂದು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದೆ.
ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿನಿಯರಾದ ಚರಿಷ್ಮಾ ಹಾಗೂ ಚದ್ಮಿಕಾ ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಂಡಿದ್ದಾರೆ.

























