ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕುಸುಮಾ ಮತ್ತು ಶ್ರೀ ಕೃಷ್ಣ ಇವರ ಪುತ್ರಿ ಯಜ್ಞ ಇವಳಿಗೆ ಉದ್ಯಾವರದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಮತ್ತು ನಂದಕುಮಾರ್ ಎಸೋಸಿಯೇಟ್ಸ್ ನ ವರಿಷ್ಠರಾದ ಎಂ. ಗಂಗಾಧರ ರಾವ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ನೂತನ ಮನೆ ‘ನಂದಾದೀಪ’ವನ್ನು ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಸ್ವಾಮೀಜಿಯವರು ಅನುಗ್ರಹ ಸಂದೇಶದಲ್ಲಿ ಎಂ.ಗಂಗಾಧರ ರಾವ್ ಅವರುತಮ್ಮ ದುಡಿಮೆಯ ಒಂದು ಪಾಲನ್ನು ಸಮಾಜಕ್ಕೆ ಅರ್ಪಿಸಿ ಸಂತೋಷವನ್ನು ಹೊಂದುವ ವಿರಳರಲ್ಲಿ ಒಬ್ಬರು. ದಾನಿಗಳಿಂದ ಸ್ವೀಕರಿಸಿದ ಹಣದಿಂದ ಸಮಾಜಮುಖಿ ಕೆಲಸ ಮಾಡುವ ಸಂಘಟನೆಯ ವರಿಷ್ಠರು ಸ್ವತಃ ದಾನಿಯಾದಾಗ ಜನರಿಂದ ಪಡೆಯುವ ಬೆಂಬಲಕ್ಕೆ ನೈತಿಕ ಬಲ ಹೆಚ್ಚುತ್ತದೆ ಎಂದರು. ಯಕ್ಷಗಾನ ಕಲಾರಂಗದ ಮೂಲಕ ಆರು ಮನೆಗಳ ಪ್ರಾಯೋಜಕತ್ವ ವಹಿಸಿದ ಅವರಿಗೆ ಇನ್ನಷ್ಟು ಸಾಮರ್ಥ್ಯವನ್ನು ಭಗವಂತ ಕರುಣಿಸಲಿ ಎಂದು ಹರಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಮಾತನಾಡಿ ಕಲಾರಂಗದ ಕಾರ್ಯಕ್ರಮಕ್ಕೆ ಬಂದಾಗ ಸಜ್ಜನರ ಒಡನಾಟ ಸಿಗುತ್ತದೆ. ಸಮಯ ಪ್ರಜ್ಞೆಯಿಂದ ಶಿಸ್ತುಬದ್ಧವಾಗಿ ನಡೆಸುವ ಕಾರ್ಯಕ್ರಮ ಸಮಾಜಕ್ಕೊಂದು ಸಂದೇಶ. ಗಂಗಾಧರ ರಾಯರ ಸರಳತೆ, ಸಜ್ಜನಿಕೆ, ಸಮಾಜ ಪ್ರೀತಿ ಉಳಿದವರಿಗೆ ಅನುಕರಣೀಯವೆಂದು ತಿಳಿಸಿದರು.
ಗಂಗಾಧರ್ ರಾವ್ ಮಾತನಾಡಿ ಯಕ್ಷಗಾನ ಕಲಾರಂಗದ ಸದಸ್ಯರ ಒಡನಾಟ ಮತ್ತು ಸಮಾಜಮುಖಿ ಚಿಂತನೆಯಿಂದ ಪ್ರಭಾವಿತನಾಗಿದ್ದೇನೆ. ವಿದ್ಯಾರ್ಥಿನಿಯ ತಂದೆ ಕೃಷ್ಣ ನಿಷ್ಠಾವಂತ ಕೆಲಸಗಾರರಾಗಿದ್ದು ಅರ್ಧಕ್ಕೆ ನಿಂತಿದ್ದ ಅವರ ಮನೆಯನ್ನು ಪೂರ್ತಿಗೊಳಿಸಿದ ತೃಪ್ತಿ ನನಗಿದೆ ಎಂದರು.
ವಿಜಯ ಇಂಡಸ್ಟ್ರೀಸ್ ಮಾಲಕ ಕೆ. ಸತ್ಯೇಂದ್ರ ಪೈ, ಇಂಜಿನಿಯರ್ಸ್ ಅಸೋಶಿಯೇಷನ್ ಅಧ್ಯಕ್ಷ ಯೋಗಿಶ್ಚಂದ್ರಧರ್,ನ್ಯಾಯವಾದಿ ಎಂ. ಗೋಪಿಕೃಷ್ಣ ರಾವ್, ಯು.ವಿಶ್ವನಾಥ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಮೊದಲಿನ ಮನೆಗಳ ಪ್ರಾಯೋಜಕತ್ವ ವಹಿಸಿದ್ದ ಮರ್ಣೆ ಉಮೇಶ್ ಭಟ್, ಡಾ. ಜೆ.ಎನ್.ಭಟ್, ಯು. ಎಸ್. ರಾಜಗೋಪಾಲ್ ಆಚಾರ್ಯ, ಅರವಿಂದ ನಾಯಕ್, ಪಿ. ಕೃಷ್ಣಮೂರ್ತಿ ಭಟ್, ವಿಜಯ್ ಕುಮಾರ್ ಮುದ್ರಾಡಿ ಮತ್ತು ಪ್ರಾಯೋಜಕತ್ವ ವಹಿಸಲಿರುವ ವಿಷ್ಣುಮೂರ್ತಿ ಭಟ್, ಸುದರ್ಶನ ಮೂರ್ತಿ-ಲಕ್ಷ್ಮಿ ದಂಪತಿಗಳು ಭಾಗವಹಿಸಿದ್ದರು.
ಉಡುಪಿ ಇಂಜಿನಿಯರ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರಾದ ಎಂ.ಗೋಪಾಲ ಭಟ್, ಪಾಂಡುರಂಗ ಆಚಾರ್ ಮತ್ತು ಪದಾಧಿಕಾರಿಗಳು,ಕಲಾರಂಗದ ಎಸ್. ವಿ.ಭಟ್, ಪ್ರೊ.ಕೆ.ಸದಾಶಿವ ರಾವ್, ವಿದ್ಯಾ ಪ್ರಸಾದ್ , ಎಂ. ಗಂಗಾಧರ ರಾವ್ ಕುಟುಂಬಿಕರಾದ ಸರಸ್ವತಿ ಜಿ.ರಾವ್, ಪಾವನಿ, .ಹರಿಣಿ ಜಿ.ರಾವ್, ಕಮಲಾಕ್ಷಿ, ಐಶ್ವರ್ಯ ಪಾಲ್ಗೊಂಡಿದ್ದರು.
ಗಂಗಾಧರ ರಾವ್ ಸ್ವಾಗತಿಸಿ , ನಾರಾಯಣ ಎಂ. ಹೆಗಡೆ ವಂದಿಸಿದರು. ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

























