ಅತ್ಯಾಚಾರ ದೂರು ದಾಖಲಿಸಿದ ಶಿಕ್ಷಕಿಗೆ ಬೆದರಿಕೆ?

ಇನ್‌ಸ್ಪೆಕ್ಟರ್‌ ಸಂದೇಶ್‌ ಪರವಾಗಿ ಮಹಿಳೆಯರಿಬ್ಬರಿಂದ ಬೆದರಿಕೆ ಎಂದು ಆರೋಪ

ಮಂಗಳೂರು: ಅಮಾನತಿನಲ್ಲಿರುವ ಮೂಡುಬಿದಿರೆ ಇನ್‌ಸ್ಪೆಕ್ಟರ್​​​ ಸಂದೇಶ್ ವಿರುದ್ಧ ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದ ಸಂತ್ರಸ್ತ ಶಿಕ್ಷಕಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಪ್ರಕರಣ ಬಯಲಾಗುತ್ತಲೇ ಸಂತ್ರಸ್ತೆಗೆ ಮಾ.19ರಂದು ಸ್ಮಿತಾ ಮತ್ತು ಸುನೀತಾ ಲೋಬೊ ಎಂಬಿಬ್ಬರು ಮಹಿಳೆಯರ ಮೂಲಕ ಸಂದೇಶ್​​ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಇಬ್ಬರು ಮಹಿಳೆಯರನ್ನು ಸಂತ್ರಸ್ತೆ ಶಿಕ್ಷಕಿಯ ಮನೆಗೆ ಕಳುಹಿಸಿ ಇಲ್ಲಿಯವರೆಗೂ ನಡೆದ ವಿಚಾರಗಳ ಬಗ್ಗೆ ಬಾಯಿ ಬಿಡಬಾರದು. ಬಾಯಿ ಬಿಟ್ಟರೆ ಕೇಸ್ ದಾಖಲಿಸುತ್ತೇವೆ. ಜೀವಂತವಾಗಿ ಬಿಡುವುದಿಲ್ಲ ಎಂದೂಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆಯಲ್ಲಿ ಸಂದೇಶ್​​ ವಿರುದ್ಧ ಸಂತ್ರಸ್ತೆ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಆರೋಪದಡಿ ಎಫ್‌​ಐಆರ್​ ದಾಖಲಾಗಿದ್ದು, 2018ರಿಂದ 2023ರವರೆಗೆ ಶಿಕ್ಷಕಿ ಮನೆಗೆ ಹೋಗಿ ಬೆದರಿಸಿ ಅತ್ಯಾಚಾರ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. 2020ರಲ್ಲಿ ಸಂದೇಶ್​​​ ಬೆಳ್ತಂಗಡಿ ಸರ್ಕಲ್ ವ್ಯಾಪ್ತಿಯಲ್ಲಿರುವ ವೇಣೂರು ಪೊಲೀಸ್ ಠಾಣೆ ಸರ್ಕಲ್ ಇನ್ಸ್​ಪೆಕ್ಟರ್​​​ ಆಗಿದ್ದರು. ಹೀಗಾಗಿ ವೇಣೂರು ಠಾಣಾ ವ್ಯಾಪ್ತಿಯಲ್ಲೇ ಅತ್ಯಾಚಾರ ಆರೋಪದಡಿ ಸೆಕ್ಷನ್ 376(2)(a)(1), 376(2)(n), 384, 506ರಡಿ ಕೇಸ್ ದಾಖಲಾಗಿದೆ.























































 
 

ಮತ್ತೊಂದೆಡೆ ಬಗೆದಷ್ಟೂ ಸಂದೇಶ್​​ ಕಾಮಕಾಂಡ ಬಯಲಾಗುತ್ತಿದ್ದು, ಉಂಡು ಹೋದ ಕೊಂಡು ಹೋದ ಎಂಬ ಮಾತಿಗೆ ಪ್ರಕರಣ ಹೇಳಿ ಮಾಡಿಸಿದಂತೆ ಭಾಸವಾಗುತ್ತಿದೆ. ಅತ್ಯಾಚಾರ ಸಂತ್ರಸ್ತೆ ಶಿಕ್ಷಕಿ ಬಳಿ ಇನ್‌ಸ್ಪೆಕ್ಟರ್​​ 16 ಲಕ್ಷ ರೂಪಾಯಿಯನ್ನೂ ಲಪಟಾಯಿಸಿದ್ದ ಎನ್ನಲಾಗಿದ್ದು, 13 ಲಕ್ಷ ನಗದು ಮತ್ತು 3,62,000 ರೂಪಾಯಿ ಹಣವನ್ನು ಬ್ಯಾಂಕಿಗೆ ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ವೇಣೂರು ಠಾಣೆಗೆ ಸಂತ್ರಸ್ತೆ ದಾಖಲೆಗಳನ್ನೂ ನೀಡಿದ್ದಾರೆ ಎನ್ನಲಾಗಿದೆ. ಸಂದೇಶ್ ವಿರುದ್ಧ ಇಬ್ಬರು ಮಹಿಳೆಯರು ಮಾಡಿದ್ದ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಹೇಳಿದ್ದರೂ ಈಗ ಕೇಳಿಬಂದಿರುವ ಆರೋಪಗಳು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿವೆ.

ಸಂದೇಶ್‌ ಮಹಿಳೆಯರಿಗೆ ಕಿರುಕುಳ ನೀಡಿರುವ ವಿಡಿಯೋ ಮತ್ತು ಆಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ ಮಂಗಳೂರು ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿಯವರು ದುರ್ವರ್ತನೆ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಇದರ ಬಳಿಕ ಸಂದೇಶ್‌ ವಿರುದ್ಧ ಅತಯಾಚಾರದ ಕೇಸ್‌ ದಾಖಲಾಗಿದೆ.

error: Content is protected !!
Scroll to Top