ಪುತ್ತೂರು:ಪುತ್ತೂರಿನ ಕೃಷ್ಣನಗರದ ಸಮೀಪವಿರುವ ಹಳೆಯ ಮನೆಯೊಂದರ ಮೇಲ್ಛಾವಣಿಯು ಸಂಪೂರ್ಣವಾಗಿ ಶಿಥಿಲಗೊಂಡು ವಾಸಿಸಲು ಯೋಗ್ಯವಲ್ಲದ ಸ್ಥಿತಿಯಲ್ಲಿದ್ದಾಗ, ಶ್ರೀ ಸತ್ಯಸಾಯಿ ಸ್ವಯಂಸೇವಕರು ಮಾನವೀಯತೆಯ ನೆಲೆಯಲ್ಲಿ ನೆರವಿಗೆ ಧಾವಿಸಿದ್ದಾರೆ. ಮಳೆಗಾಲದ ಮುನ್ನವೇ ಈ ಮನೆಯನ್ನು ದುರಸ್ತಿಗೊಳಿಸುವ ಉದ್ದೇಶದಿಂದ, ವಿಶೇಷ ಸೇವಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸದಸ್ಯರು ಸ್ವತಃ ಶ್ರಮದಾನದಲ್ಲಿ ಪಾಲ್ಗೊಂಡು, ಹಳೆಯ ಮೇಲ್ಛಾವಣಿಯನ್ನು ತೆರವುಗೊಳಿಸಿ ಹೊಸ ಶೀಟ್ ಹಾಗೂ ಅಗತ್ಯ ಸಾಮಗ್ರಿಗಳನ್ನು ಅಳವಡಿಸುವ ಮೂಲಕ ಮನೆಯನ್ನು ಸುಸ್ಥಿತಿಗೆ ತಂದಿದ್ದಾರೆ.
ಈ ಉದಾತ್ತ ಸೇವಾ ಕಾರ್ಯದಲ್ಲಿ ಪ್ರೊ. ಗೋವಿಂದ ಭಟ್, ರಮೇಶ್ ಆಚಾರ್, ಜಗನ್ನಾಥ ರೈ, ಸಂತೋಷ್ ವಾಗ್ಲೆ, ನಾರಾಯಣ ರೈ, ಸತ್ಯನಾರಾಯಣ ಭಟ್ ಮತ್ತು ಡಾ. ಸಂತೋಷ್ ಪ್ರಭು ಅವರು ಸಕ್ರಿಯವಾಗಿ ಪಾಲ್ಗೊಂಡು ಶ್ರಮದಾನ ಮಾಡಿದರು. ಸತ್ಯಸಾಯಿ ಸಂಘಟನೆಯ “ಮಾನವ ಸೇವೆಯೇ ಮಾಧವ ಸೇವೆ” ಎಂಬ ತತ್ವದಂತೆ, ಈ ತಂಡವು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಶ್ರಮವಹಿಸಿ ಕೆಲಸ ಮಾಡಿರುವುದು ಸ್ಥಳೀಯರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಸಕಾಲದಲ್ಲಿ ಒದಗಿದ ಈ ನೆರವು ಮನೆಯ ನಿವಾಸಿಗಳಿಗೆ ದೊಡ್ಡ ಸಮಾಧಾನ ತಂದಿದ್ದು, ಸಮಾಜದ ಬಗ್ಗೆ ಸತ್ಯಸಾಯಿ ಸ್ವಯಂಸೇವಕರು ಹೊಂದಿರುವ ಬದ್ಧತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

























