ಭೀಕರ ಅಪಘಾತ : ಮೂವರು ಮಹಿಳೆಯರ ಸಹಿತ ಆರು ಮಂದಿ ಸಾವು

ಬೆಂಗಳೂರು: ಬೆಂಗಳೂರಿನ ಆಸುಪಾಸಿನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಎರಡು ಭೀಕರ ಅಪಘಾತದಲ್ಲಿ ಒಟ್ಟು ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇವನಹಳ್ಳಿ ಹೊರವಲಯದ ರಾಣಿ ಕ್ರಾಸ್ ಬಳಿ ಮಧ್ಯರಾತ್ರಿ ನಡೆದ ಅಪಘಾತದಲ್ಲಿ ಮೂವರು ಮಹಿಳೆಯರು ದಾರುಣವಾಗಿ ಮೃತಪಟ್ಟಿದ್ದಾರೆ. ಹೈವೆಯಿಂದ ಸರ್ವೀಸ್ ರಸ್ತೆಗೆ‌ ಬರುತ್ತಿದ್ದ ಟಿಟಿ ವಾಹನಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ವಾಹನದಲ್ಲಿದ್ದ 13 ಮಂದಿ ಪೈಕಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಯಮ್ಮ(60), ಯಶೋದಮ್ಮ(60), ಗಂಗಾ(38) ಮೃತರು. ಟಿಟಿ ವಾಹನ ಚಾಲಕ ಸೇರಿದಂತೆ 8 ಜನರಿಗೆ ಅಪಘಾತದಲ್ಲಿ ಗಾಯಗಳಾಗಿವೆ. ದೇವನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಂಪಮ್ಮ‌ ಎಂಬುವರು ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

15 ದಿನಗಳ ಪ್ರವಾಸಕ್ಕೆಂದು ಒಂದೇ ಏರಿಯಾದ ಜನರು ಹೊರಟಿದ್ದರು. ಸ್ತ್ರೀ ಶಕ್ತಿ ಸಂಘಟನೆ ಚೀಟಿ ಮೂಲಕ‌ ಪ್ರವಾಸದ ಪ್ಲಾನ್ ಮಾಡಿದ್ದ 12 ಜನರ ತಂಡ ಇಂದು ಬೆಳಗ್ಗೆ 6 ಗಂಟೆಯ ಪ್ಲೈಟ್‌ನಲ್ಲಿ ಕಾಶಿಗೆ ಟಿಕೆಟ್ ಬುಕ್ ಮಾಡಿತ್ತು. ಹೀಗಾಗಿ ತಿಪಟೂರಿನಿಂದ ಕೆಂಪೇಗೌಡ ಏರ್ಪೋರ್ಟ್​​ಗೆ ಟಿಟಿ ವಾಹನದ ಮೂಲಕ ರಾತ್ರಿ 10 ಗಂಟೆ ಸುಮಾರಿಗೆ ಹೊರಟಿದ್ದರು. ಏರ್​​ಪೋರ್ಟ್​​ನ ಟರ್ಮಿನಲ್​​ ದಾರಿಯ ಬಗ್ಗೆ ಸರಿಯಾಗಿ ತಿಳಿದಿರದ ಕಾರಣ ಗೂಗಲ್ ಮ್ಯಾಪ್ ಹಾಕಿಕೊಂಡು ಟಿಟಿ ಚಾಲಕ ವಾಹನ ಚಾಲನೆ ಮಾಡುತ್ತಿದ್ದ. ಅಪಘಾತ ನಡೆದ ಸ್ಥಳಕ್ಕೂ ಹಿಂದೆಯೇ ಸರ್ವೀಸ್​​ ರಸ್ತೆಗೆ ಮೊದಲ ಟರ್ನಿಂಗ್ ಇತ್ತು. ಆದರೆ ಅದು ಗೊತ್ತಾಗದೆ ಮುಂದೆ ಪಾಸ್ ಆಗಿದ್ದ ಟಿಟಿ ವಾಹನ ಮುಂದಿನ ಟರ್ನಿಂಗ್​​ನಲ್ಲಿ ಯೂಟರ್ನ್​​ ಪಡೆಯುವ ವೇಳೆ ಲಾರಿ ಟಿಟಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಟಿಟಿಯ ಎಡಭಾಗ ಸಂಪೂರ್ಣ ಜಖಂ ಆಗಿದ್ದು, ಸಿಂಗಲ್ ಸೀಟ್‌ಗಳಲ್ಲಿ ಕುಳಿತಿದ್ದ ಮೂವರು ಮಹಿಳೆಯರ ದುರ್ಮರಣ ಹೊಂದಿದ್ದಾರೆ.

ಇನ್ನೊಂದು ಅಒಘಾತದಲ್ಲಿ ನಿಂತಿದ್ದ ಈಚರ್​ ವಾಹನಕ್ಕೆ ಗೂಡ್ಸ್ ಆಟೋ ಡಿಕ್ಕಿಯಾಗಿ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆ.ಆರ್​​.ಪುರಂ ಸಂಚಾರ ಠಾಣಾ ವ್ಯಾಪ್ತಿಯ ಮೇಡಹಳ್ಳಿ ಮೇಲ್ಸೇತುವೆ ಮೇಲೆ ನಡೆದಿದೆ. ಅಪಘಾತದ ತೀವ್ರತೆಗೆ ಗೂಡ್ಸ್ ಆಟೋದಲ್ಲಿದ್ದ ಮಣಿಕಂಠ, ಸುರೇಶ್, ಶ್ರೀನಿವಾಸ್ ಪ್ರಾಣ ಕಳೆದುಕೊಂಡಿದ್ದಾರೆ. ಮೃತರು ವೈಟ್ ಫೀಲ್ಡ್ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.























































 
 

ಕೋಲಾರದಿಂದ ಬೆಂಗಳೂರಿಗೆ ಆಲೂಗಡ್ಡೆ ತುಂಬಿಸಿಕೊಂಡು ಬರ್ತಿದ್ದ ಕ್ಯಾಂಟರ್ ಮೇಡಹಳ್ಳಿ ಮೇಲ್ಸೇತುವೆ ಮೇಲೆ ಟೈರ್ ಬ್ಲಾಸ್ಟ್​​​ ಆಗಿ ನಿಂತಿತ್ತು. ರಸ್ತೆ ಬದಿ ಕ್ಯಾಂಟರ್ ನಿಲ್ಲಿಸಿ ಚಾಲಕ ಟೈರ್ ಚೇಂಜ್ ಮಾಡುತ್ತಿದ್ದ. ಇದೇ ವೇಳೆ ನಿಂತಿದ್ದ ಕ್ಯಾಂಟರ್​​​ಗೆ ಹಿಂದೆಯಿಂದ ಗೂಡ್ಸ್ ಆಟೋ ಡಿಕ್ಕಿಯಾಗಿದೆ. ಸ್ಥಳಕ್ಕೆ ಡಿಸಿಪಿ ನೇಮಗೌಡ ಮತ್ತು ಕೆ.ಆರ್.ಪುರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕೆ.ಆರ್.ಪುರಂ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

error: Content is protected !!
Scroll to Top