ಪುತ್ತೂರು: ನಿವೃತ್ತ ಪ್ರಾಂಶುಪಾಲರ ಮನೆಗೆ ಮಧ್ಯರಾತ್ರಿ ನುಗ್ಗಿ ದರೋಡೆಗೆ ಯತ್ನಿಸಿ, ದಂಪತಿಯನ್ನು ಬೆದರಿಸಿದ ಪ್ರಕರಣದಲ್ಲಿ ಪುತ್ತೂರು ನಗರ ಪೊಲೀಸರು ಆರೋಪಿಗಳಾದ ಆರ್ಚಕ ಹಾಗೂ ಆತನ ಪತ್ನಿಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಕಾರ್ತಿಕ್ ರಾವ್(31) ಹಾಗೂ ಅವನ ಪತ್ನಿ ಸ್ವಾತಿ ರಾವ್ ಬಂಧಿತ ಆರೋಪಿಗಳು.
ಪುತ್ತೂರು ಕಸಬಾ ನಿವಾಸಿ ನಿವೃತ್ತ ಪ್ರಾಂಶುಪಾಲ ಎ.ವಿ.ನಾರಾಯಣ(84) ಅವರು ನೀಡಿದ ದೂರಿನಂತೆ ಡಿ.17ರ ಮಧ್ಯರಾತ್ರಿ ಇಬ್ಬರು ಅಪರಿಚಿತರು ಹೆಲೈಟ್ ಧರಿಸಿಕೊಂಡು ಮುಖಚಹರೆಯನ್ನು ಮರೆಮಾಚಿ ಮನೆ ಹಿಂಬಾಗಿಲಿನಿಂದ ಪ್ರವೇಶಿಸಿ ಬೆಲೆಬಾಳುವ ಸೊತ್ತುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳು ಎ.ವಿ.ನಾರಾಯಣ ಹಾಗೂ ಅವರ ಪತ್ನಿಯನ್ನು ಬೆದರಿಸಿದ್ದು, ನಡೆದ ತಳ್ಳಾಟದಲ್ಲಿ ನಾರಾಯಣ ಅವರ ಪತ್ನಿಗೆ ಗಾಯಗಳಾಗಿದೆ.
ಅವರು ಹೆದರಿ ಜೋರಾಗಿ ಕಿರುಚಿದಾಗ ಆರೋಪಿಗಳು ಮನೆಯ ಹಿಂಬಾಗಿಲ ಮೂಲಕ ಓಡಿ ತಪ್ಪಿಸಿಕೊಂಡಿದ್ದಾರೆ. ಈ ಬಗ್ಗೆ ಪುತ್ತೂರಿನ ನಗರ ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿತ್ತು. ಪೊಲೀಸರು ಪ್ರಕರಣದ ತನಿಖೆ ನಡೆಸಿ ಆರೋಪಿಗಳಾದ ಕಾರ್ತಿಕ್ ರಾವ್ ಹಾಗೂ ಆತನ ಪತ್ನಿ ಸ್ವಾತಿ ರಾವ್ ಎಂಬವರನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿ ಕಾರ್ತಿಕ್ ಸಹಾಯಕ ಅರ್ಚಕನಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ.
























