ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ : ಪೊಲೀಸರ ಕಣ್ಗಾವಲಿನ ನಡುವೆ ಮೋಜುಮಸ್ತಿ

ಪಟಾಕಿ ಸಿಡಿಸಿ, ಕೇಕ್‌ ಕಟ್‌ ಮಾಡಿ ಸಂಭ್ರಮಿಸಿದ ಜನ

ಮಂಗಳೂರು: ಹೊಸ ವರ್ಷವನ್ನು ಇಡೀ ವಿಶ್ವವೇ ಸಂಭ್ರಮದಿಂದ ಸ್ವಾಗತಿಸಿದೆ. ಮಂಗಳೂರು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಗಡಿಯಾರದ ಮುಳ್ಳು ರಾತ್ರಿ 12ನ್ನು ಸ್ಪರ್ಶಿಸುತ್ತಿದ್ದಂತೆ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಪಟಾಕಿ ಸಿಡಿಸಿ ಜನರು 2026ಕ್ಕೆ ಸ್ವಾಗತ ಕೋರಿದರು. ಮಂಗಳೂರಿನಲ್ಲಿ ಡಿಜೆ ಸಾಂಗ್‍ಗಳ ಜೊತೆಗೆ ಯಕ್ಷಗಾನದ ಹಾಡುಗಳಿಗೆ ನೃತ್ಯ ಮಾಡಿ ಹೊಸ ವರ್ಷವನ್ನು ಜನ ಸ್ವಾಗತಿಸಿದ್ದಾರೆ.

ಮಂಗಳೂರಿನ ಕೆಲವೆಡೆ ಖಾಸಗಿಯಾಗಿ ಪಾರ್ಟಿಗಳು ನಡೆದಿವೆ. ಹೋಟೆಲ್‌, ಬಾರ್‌ಗಳಲ್ಲಿ ಮಾಮೂಲಿಗಿಂತ ಹೆಚ್ಚು ಜನ ಇದ್ದರು. ಆದರೆ ಪೊಲೀಸರು ಬಹಳ ಕಟ್ಟುನಿಟ್ಟಿನ ನಿಯಮ ಮಾಡಿದ ಕಾರಣ ಕೆಲವರ ಪಾಲಿಗೆ ಹೊಸ ವರ್ಷ ಸಪ್ಪೆಯಾಗಿತ್ತು. ಇಡೀ ರಾತ್ರಿ ಪೊಲೀಸರು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಬೀಟ್‌ ಕರ್ತವ್ಯ ಮಾಡಿದ್ದಾರೆ. ಎಲ್ಲೂ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದಾರೆ. ರಾತ್ರಿಯಿಡೀ ಪೊಲೀಸ್‌ ವಾಹನಗಳು ಪ್ರಮುಖ ರಸ್ತೆಯಲ್ಲಿ ಓಡಾಡುತ್ತಿದ್ದವು.





















































 
 

ಬೆಂಗಳೂರಿನ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ನಲ್ಲಿ ಜನಸಾಗರವೇ ಸೇರಿತ್ತು. ಪಬ್‌ಗಳಲ್ಲಿ ರಾತ್ರಿ 11.59ರಿಂದ ಕೌಂಟ್‌ಡೌನ್‌ ಆರಂಭವಾಗಿ ಕೊನೆಯ 5 ಸೆಕೆಂಡ್‌ ಇದ್ದಾಗ ಜನರು 5,4,3,2,1 ಎಣಿಸುವ ಮೂಲಕ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರು. ಹಾಡು, ಕುಣಿತ, ಡ್ಯಾನ್ಸ್, ಮಸ್ತಿ ಮಾಡಿ, ಪಟಾಕಿ ಸಿಡಿಸಿ ಹೊಸ ವರ್ಷವನ್ನು ಬರಮಾಡಿಕೊಂಡರು. ಬಾರ್, ಪಬ್, ಕ್ಲಬ್‍ಗಳಲ್ಲಿ ಸೇರಿದ್ದ ಪಾರ್ಟಿ ಪ್ರಿಯರು ಸಖತ್ ಎಂಜಾಯ್ ಮಾಡಿದರು. ಕೆಲವು ಅಹಿತರಕರ ಘಟನೆಗಳು ನಡೆದಿರುವುದು ಹೊರತುಪಡಿಸಿದರೆ ಹೊಸ ವರ್ಷಾಚರಣೆ ಬಹುತೇಕ ಶಾಂತಿಯುತವಾಗಿತ್ತು.

ಹೊಸ ವರ್ಷದ ಸಂಭ್ರಾಚರಣೆ ಜೋರು ನಡೆಯುವ ಎಂಜಿ ರೋಡ್, ಬ್ರಿಗೇಡ್ ರೋಡ್ ರಸ್ತೆಗಳು ದೀಪಾಲಂಕಾರದಿಂದ ಮಿಂಚುತ್ತಿದ್ದವು. ಈ ಸ್ಥಳಗಳಿಗೆ ಬರಲು ಸಾಧ್ಯವಾಗದವವರು ಮನೆಯ ಬಳಿಯೇ ಪಟಾಕಿ ಸಿಡಿಸಿ ಹೊಸ ವರ್ಷವನ್ನು ಸಂಭ್ರಮಿಸಿದರು.

ನಗರದ ಪ್ರಮುಖ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿತ್ತು. 20,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 6,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ವಾಚ್‌ಟವರ್‌ಗಳಿಂದ ನಿಗಾ ವಹಿಸಲಾಗಿದೆ.

ಮಹಿಳೆಯರ ಸುರಕ್ಷತೆಗೆ ವಿಶೇಷ ಗಮನ ನೀಡಿದ್ದು, ಹೆಚ್ಚುವರಿ ಮಹಿಳಾ ಸಿಬ್ಬಂದಿ, ಸೇಫ್ಟಿ ಐಲ್ಯಾಂಡ್‌ಗಳು, ವುಮೆನ್ ಶೆಲ್ಟರ್‌ಗಳು ಮತ್ತು ಸಹಾಯವಾಣಿ ವ್ಯವಸ್ಥೆ ಮಾಡಲಾಗಿತ್ತು. ಜನಸಂದಣಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ನಿಷೇಧ ಮಾಡಲಾಗಿತ್ತು. ಬೆಂಗಳೂರು ಮಾತ್ರವಲ್ಲ ಎಲ್ಲ ಜಿಲ್ಲೆಗಳಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಅದ್ದೂರಿಯಾಗಿತ್ತು.

error: Content is protected !!
Scroll to Top