ಹೊಸ ಸೆಸ್ ವಿಧಿಸಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ
ನವದೆಹಲಿ: ಮುಂಬರುವ ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾ ಮೇಲೆ ಹೊಸ ಸೆಸ್ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ವರದಿಯ ಪ್ರಕಾರ ಒಂದು ಫೆ.1ರಿಂದ ಸಿಗರೇಟಿನ ಬೆಲೆ 70 ರೂಪಾಯಿಗೂ ಅಧಿಕವಿರಲಿದೆ.
ತಂಬಾಕು ಮತ್ತು ಪಾನ್ ಮಸಾಲಾ ಮೇಲಿನ ಹೊಸ ಸುಂಕಗಳು ಜಿಎಸ್ಟಿ ದರಕ್ಕಿಂತ ಹೆಚ್ಚಿರುತ್ತವೆ. ಸರಕುಗಳ ಮೇಲೆ ಪ್ರಸ್ತುತ ವಿಧಿಸಲಾಗುತ್ತಿರುವ ಪರಿಹಾರ ಸೆಸ್ ಅನ್ನು ಬದಲಾಯಿಸುತ್ತವೆ. ಫೆ.1ರಿಂದ ಪಾನ್ ಮಸಾಲಾ, ಸಿಗರೇಟ್, ತಂಬಾಕು ಮತ್ತು ಈ ಮಾದರಿಯ ಉತ್ಪನ್ನಗಳಿಗೆ ಶೇ.40ರಷ್ಟು ಜಿಎಸ್ಟಿ ದರ ಇರಲಿದೆ. ಬೀಡಿಗಳಿಗೆ ಶೇ.18 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಬೀಳಲಿದೆ ಎಂದು ಸರ್ಕಾರಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುವುದು, ಆದರೆ ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳು ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗುವುದು.
ಬುಧವಾರ ಹಣಕಾಸು ಸಚಿವಾಲಯ ಚೂಯಿಂಗ್ ತಂಬಾಕು, ಜರ್ದಾ ಸುಗಂಧಿತ ತಂಬಾಕು ಮತ್ತು ಗುಟ್ಕಾ ಪ್ಯಾಕಿಂಗ್ ಯಂತ್ರಗಳ (ಸಾಮರ್ಥ್ಯ ನಿರ್ಣಯ ಮತ್ತು ಸುಂಕ ಸಂಗ್ರಹ) ನಿಯಮಗಳು-2026 ಅಧಿಸೂಚನೆ ಹೊರಡಿಸಿದೆ. ಡಿಸೆಂಬರ್ನಲ್ಲಿ ಸಂಸತ್,ಅಧಿವೇಶನದಲ್ಲಿ ಪಾನ್ ಮಸಾಲಾ ತಯಾರಿಕೆಯ ಮೇಲೆ ಹೊಸ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಹಾಗೂ ತಂಬಾಕಿನ ಮೇಲಿನ ಅಬಕಾರಿ ಸುಂಕವನ್ನು ವಿಧಿಸಲು ಅನುಮತಿಸುವ ಎರಡು ಮಸೂದೆಗಳನ್ನು ಅಂಗೀಕರಿಸಲಾಗಿತ್ತು.
























