ಅಕ್ಟೋಬರ್ 15ರಿಂದ ಉಪವಾಸ ಸತ್ಯಾಗ್ರಹದ ನಿರ್ಧಾರ
ಬೆಂಗಳೂರು : ಸರ್ಕಾರ ಯಾವ ಬೇಡಿಕೆಯನ್ನೂ ಈಡೇರಿಸದಿರುವ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಮತ್ತೆ ಸಾರಿಗೆ ಮುಷ್ಕರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಮುಂದಾಗಿದ್ದು, ಮೊದಲ ಹಂತದಲ್ಲಿ ಅಕ್ಟೋಬರ್ 15 ರಿಂದ 19ರ ವರೆಗೆ ಉಪವಾಸ ಸತ್ಯಾಗ್ರಹ ಮಾಡಲು ಚಿಂತನೆ ನಡೆಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಈ ಐದು ದಿನಗಳ ಕಾಲ ಸರ್ಕಾರಿ ಬಸ್ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ.
ಕಳೆದ ಆಗಸ್ಟ್ 5ರಂದು ನಾಲ್ಕು ನಿಗಮದ ನೌಕರರು ಸಾರಿಗೆ ಮುಷ್ಕರಕ್ಕೆ ಮುಂದಾಗಿದ್ದರು. ಆದರೆ ಹೈಕೋರ್ಟ್ ಆದೇಶದ ಹಿನ್ನೆಲೆ ಮುಷ್ಕರವನ್ನು ವಾಪಸ್ ಪಡೆಯಲಾಗಿತ್ತು. ಆದರೆ ಇಲ್ಲಿಯವರೆಗೆ ರಾಜ್ಯ ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿಲ್ಲ ಮತ್ತು ಮಾತುಕತೆಗೆ ಕರೆಯುತ್ತಿಲ್ಲ. ಹೀಗಾಗಿ ಮತ್ತೆ ಮುಷ್ಕರ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
38 ತಿಂಗಳ ಹಿಂಬಾಕಿ ಬಿಡುಗಡೆ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅ.15ರಿಂದ ಐದು ದಿನಗಳ ಕಾಲ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದೆ. ಅ. 15ರಿಂದ 19ರವರೆಗೆ ಬೆಂಗಳೂರು, ಹುಬ್ಬಳ್ಳಿ ಹಾಗೂ ಕಲಬುರಗಿ ನಗರಗಳಲ್ಲಿ ಐದು ದಿನಗಳ ಕಾಲ ನಾಲ್ಕು ಸಾರಿಗೆ ನಿಗಮಗಳ ನೌಕರರು ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.
ಆ. 5ರಂದು ಆರಂಭಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹೈಕೋರ್ಟ್ ಆದೇಶದ ಮೇರೆಗೆ ತಡೆಹಿಡಿಯಲಾಗಿತ್ತು. ಸರ್ಕಾರ ಬೇಡಿಕೆಗಳ ಕುರಿತು ಮಾತುಕತೆ ಮುಂದುವರಿಸುವುದಾಗಿ ಹೈಕೋರ್ಟ್ಗೆ ತಿಳಿಸಿತ್ತು. ಅದರಂತೆ, ಜಂಟಿ ಕ್ರಿಯಾ ಸಮಿತಿ ಆಗಸ್ಟ್ 11 ಮತ್ತು ಸೆ.15ರಂದು ರಾಜ್ಯ ಸರಕಾರಕ್ಕೆ ಪತ್ರ ಬರೆದು ಶೀಘ್ರವೇ ಸಭೆ ಕರೆದು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿತ್ತು. ಆದರೆ, ಸರ್ಕಾರ ಈವರೆಗೂ ಮಾತುಕತೆ ಆರಂಭಿಸದೆ ಕಾರ್ಮಿಕ ವಿರೋಧಿ ಧೋರಣೆ ತಾಳಿದೆ ಎಂದು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಚ್.ವಿ. ಅನಂತ ಸುಬ್ಬರಾವ್ ಆರೋಪಿಸಿದ್ದಾರೆ.
























