ಆನ್ಲೈನ್ ಬೆಟ್ಟಿಂಗ್ನಲ್ಲಿ ಸಂಪಾದಿಸಿದ ಅಪಾರ ಅಕ್ರಮ ಸಂಪತ್ತು ಬಯಲು
ಬೆಂಗಳೂರು: ಅಕ್ರಮ ಬೆಟ್ಟಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮತ್ತೊಮ್ಮೆ ದಾಳಿ ಮಾಡಿದಾಗ ಲಾಕರ್ನಲಿದ್ದ 51 ಕೋಟಿ ರೂ. ಮೌಲ್ಯದ 40 ಕೆಜಿ ಚಿನ್ನದ ಗಟ್ಟಿ ಪತ್ತೆಯಾಗಿದೆ.
ಇ.ಡಿ. ಅಧಿಕಾರಿಗಳು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಫೆಡರಲ್ ಬ್ಯಾಂಕ್ ಸೇರಿದಂತೆ ಪಟ್ಟಣದ ಹಲವೆಡೆ ಶೋಧ ನಡೆಸಿದ್ದಾರೆ. ವೀರೇಂದ್ರ ಪಪ್ಪಿ ಆನ್ಲೈನ್ ಬೆಟ್ಟಿಂಗ್ನಲ್ಲಿ ಅಲ್ಪಾವಧಿಯಲ್ಲಿಯೇ 2,000 ಕೋಟಿ ರೂ. ಲಾಭಗಳಿಸಿದ್ದಾರೆ ಎಂಬುದು ಇ.ಡಿ ದಾಳಿ ವೇಳೆ ಬಯಲಾಗಿತ್ತು. ಈ ಹಿಂದೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು 103 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದರು.

ಅಕ್ರಮ ಆನ್ಲೈನ್ ಗೇಮ್ ಪ್ರಕರಣಕ್ಕೆ ಸಂಬಂಧಿಸಿ ವೀರೇಂದ್ರ ಪಪ್ಪಿಯವರ ವಿಚಾರಣೆ ನಡೆಸುತ್ತಿರುವ ಇ.ಡಿ ಅಧಿಕಾರಿಗಳು, ಅವರ ಮಾಹಿತಿಯನ್ನೇ ಧಾರಿಸಿ ಗುರುವಾರ ಅವರ ನಿವಾಸ ಹಾಗೂ ಫೆಡರಲ್ ಬ್ಯಾಂಕ್ನ ಎರಡು ಲಾಕರ್ಗಳಲ್ಲಿ ಪರಿಶೀಲನೆ ಮಾಡಿದರು. ಆ ನಂತರ 40 ಕೆ.ಜಿ. ತೂಕದ ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈವರೆಗೆ ಶಾಸಕ ವೀರೇಂದ್ರ ಅವರಿಂದ ಜಪ್ತಿ ಮಾಡಿರುವ ನಗ ನಾಣ್ಯದ ಮೊತ್ತವು 150 ಕೋಟಿ.ರೂ.ಎಂದು ತಿಳಿಸಿದ್ದಾರೆ.
ಆಗಸ್ಟ್ 29ರಂದು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು ಅಕ್ರಮ ಆನ್ಲೈನ್ ಹಾಗೂ ಆಫ್ಲೈನ್ ಬೆಟ್ಟಿಂಗ್ ಪ್ರಕರಣದಡಿ ಶಾಸಕ ವೀರೇಂದ್ರ ಪಪ್ಪಿಯನ್ನು ಸಿಕ್ಕಿಂನಿಂದ ಕರೆತಂದು ಬಂಧಿಸಿದ್ದರು. ಬೆಳಗಿನ ಜಾವ 5.30ರಿಂದ ಮಧ್ಯರಾತ್ರಿ 12:45 ರವರೆಗೆ ಶಾಸಕ ವೀರೇಂದ್ರ ಪಪ್ಪಿ ಹಾಗೂ ಅವರ ಸಹೋದರರಾದ ಕೆ.ಸಿ.ತಿಪ್ಪೇಸ್ವಾಮಿ ಹಾಗೂ ನಾಗರಾಜ್ ಮನೆಯಲ್ಲೂ ತೀವ್ರ ಶೋಧ ನಡೆಸಿ ಕೊನೆಗೆ ದಾಖಲೆಯೊಂದಿಗೆ ಅಧಿಕಾರಿಗಳು ವಾಪಸ್ ಹೋಗಿದ್ದರು. ಶಾಸಕರ ಒಡೆತನದಲ್ಲಿ ಗೋವಾದಲ್ಲಿ ನಡೆಯುತ್ತಿರುವ ಕ್ಯಾಸಿನೋ ಹಾಗೂ ಚಿತ್ರದುರ್ಗ ಹಾಗೂ ಬೆಂಗಳೂರು ಮತ್ತು ಸಿಕ್ಕಿಂನಲ್ಲಿರುವ ಮನೆಗಳಲ್ಲೂ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು.
ದಾಳಿ ವೇಳೆ ಇಡಿ ಅಧಿಕಾರಿಗಳಿಗೆ 12 ಕೋಟಿ ರೂ. ನಗದು, 1 ಕೋಟಿ ವಿದೇಶ ಕರೆನ್ಸಿ, 6 ಕೋಟಿ ಬೆಲೆ ಬಾಳುವ ಚಿನ್ನಾಭರಣ ಮತ್ತು 10 ಕೆಜಿ ಬೆಳ್ಳಿ ಪತ್ತೆಯಾಗಿತ್ತು. ಅಲ್ಲದೇ 5 ಐಷಾರಾಮಿ ವಾಹನಗಳನ್ನು ಕೂಡ ಇ.ಡಿ ಅಧಿಕಾರಿಗಳು ಸೀಜ್ ಮಾಡಿದ್ದು, ಶಾಸಕ ಪಪ್ಪಿ ಅವರಿಗೆ ಸೇರಿದ 17 ಬ್ಯಾಂಕ್ ಅಕೌಂಟ್ ಹಾಗೂ 2 ಲಾಕರ್ಗಳನ್ನು ಸೀಜ್ ಮಾಡಿದ್ದಾರೆ. ಜೊತೆಗೆ ವೀರೇಂದ್ರ ಅವರ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 40.69 ಕೋಟಿ ರೂ. ಪತ್ತೆಯಾಗಿದ್ದು, 262 ಮ್ಯೂಲ್ ಖಾತೆಗಳಲ್ಲಿ ಒಟ್ಟು 14.46 ಕೋಟಿ ರೂ. ಸೇರಿದಂತೆ 55 ಕೋಟಿ ರೂ. ಹಣವನ್ನು ಇ.ಡಿ ಫ್ರೀಜ್ ಮಾಡಿದೆ. ಸದ್ಯ ವಿರೇಂದ್ರ ಪಪ್ಪಿಯವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
























