ನಡೆದುಕೊಂಡು ಹೋಗುತ್ತಿರುವಾಗ ತಲೆ ಮೇಲೆ ಬಿದ್ದ ಸಿಮೆಂಟ್ ಬ್ಲಾಕ್
ಮುಂಬೈ : ನಿರ್ಮಾಣ ಹಂತದ ಕಟ್ಟಡದಿಂದ ಸಿಮೆಂಟ್ ಬ್ಲಾಕ್ ತಲೆಮೇಲೆ ಬಿದ್ದು ಕಿನ್ನಿಗೋಳಿ ಮೂಲದ ಯುವತಿಯೊಬ್ಬರು ಮುಂಬೈಯಲ್ಲಿ ಮೃತಪಟ್ಟಿರುವ ದಾರುಣ ಘಟನೆ ಗುರುವಾರ ಸಂಭವಿಸಿದೆ. ಮುಂಬೈಯ ಜೋಗೇಶ್ವರಿ ಪೂರ್ವದ ಠಾಕೂರ್ ರಸ್ತೆಯಲ್ಲಿರುವ ಮಹಾರಾಜ ಭವನ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ 22 ವರ್ಷದ ಸಂಸ್ಕೃತಿ ಅಮೀನ್ ಎಂಬ ಯುವತಿ ಸಾವನ್ನಪ್ಪಿದ್ದಾರೆ.
ಕಿನ್ನಿಗೋಳಿಯ ಪದ್ಮಾವತಿ ಲಾನ್ ಮತ್ತು ಮಲ್ಟಿಪರ್ಪಸ್ ಹಾಲ್ ಮತ್ತು ಮುಂಬೈಯ ಕೋಟ್ಯಾನ್ ಕ್ಯಾಟರರ್ಸ್ನ ಮಾಲೀಕರಾದ ಅನಿಲ್ ಮತ್ತು ಪದ್ಮಾವತಿ ಅಮೀನ್ ಅವರ ಏಕೈಕ ಪುತ್ರಿ ಸಂಸ್ಕೃತಿ ಬೆಳಿಗ್ಗೆ 9.30ರ ಸುಮಾರಿಗೆ ತನ್ನ ಕಚೇರಿಗೆ ಹೋಗಲು ಮನೆಯಿಂದ ಹೊರಟಿದ್ದರು. ಅವರು ತಮ್ಮ ನಿವಾಸದಿಂದ ಕೆಲವೇ ಮೀಟರ್ ದೂರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹತ್ತಿರದ ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಸಿಮೆಂಟ್ ಬ್ಲಾಕ್ ಅವರ ತಲೆಯ ಮೇಲೆ ಬಿದ್ದಿತು. ಅವರ ತಂದೆ ಅನಿಲ್ ಅಮೀನ್ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದರು.
ಸಂಸ್ಕೃತಿ ತನ್ನ ಹೆತ್ತವರು ಮತ್ತು ಅಜ್ಜಿಯೊಂದಿಗೆ ಜೋಗೇಶ್ವರಿ ಪೂರ್ವದ ಕಿರಣದೇವಿ ದೇವೇಂದ್ರಸಿಂಹ ಚಾಲ್ನಲ್ಲಿ ವಾಸಿಸುತ್ತಿದ್ದರು. ಅವರು ಹೋಟೆಲ್ ನಿರ್ವಹಣೆಯಲ್ಲಿ ಪದವಿ ಪೂರ್ಣಗೊಳಿಸಿ ಸೆಪ್ಟೆಂಬರ್ 29ರಂದಷ್ಟೇ ಗೋರೆಗಾಂವ್ನಲ್ಲಿರುವ ಆರ್ಬಿಎಲ್ ಬ್ಯಾಂಕ್ಗೆ ನೌಕರಿಗೆ ಸೇರಿದ್ದರು. ಮರಣೋತ್ತರ ಪರೀಕ್ಷೆ ಮತ್ತು ಔಪಚಾರಿಕತೆಯ ನಂತರ, ಗುರುವಾರ ಬೆಳಿಗ್ಗೆ ಜೋಗೇಶ್ವರಿ ಪೂರ್ವದ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆಯನ್ನು ನಡೆಸಲಾಯಿತು.
ಸ್ಥಳೀಯ ಮೇಘವಾಡಿ ಪೊಲೀಸರು ಅನಿಲ್ ಅಮೀನ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡು, ಬಿಲ್ಡರ್, ಗುತ್ತಿಗೆದಾರ, ಎಂಜಿನಿಯರ್ ಮತ್ತು ಸೈಟ್ ಮೇಲ್ವಿಚಾರಕರ ವಿರುದ್ಧ ನಿರ್ಲಕ್ಷ್ಯಕ್ಕಾಗಿ ದೂರು ದಾಖಲಿಸಿದ್ದಾರೆ.
























