ಸುಬ್ರಹ್ಮಣ್ಯ: ಗ್ರಾಮದ ನೈರ್ಮಲ್ಯ ಕಾಪಾಡುವ ಹಿತದೃಷ್ಟಿಯಿಂದ, ಕಸ ಎಸೆಯುವವರಿಗೆ ದಂಡ ವಿಧಿಸಿರುವ ಘಟನೆ ಸುಬ್ರಹ್ಮಣ್ಯದಲ್ಲಿ ಸೋಮವಾರ ನಡೆದಿದೆ.
ಸೋಮವಾರ ಕುಮಾರಧಾರ ನದಿಯ ಸೇತುವೆ ಮೇಲಿಂದ ಕಾರ್ಕಳದ ವೇದವ್ಯಾಸ ತಂತ್ರಿ ಎಂಬವರು ಕಸ ಎಸೆಯುವ ದೃಶ್ಯವನ್ನು ಸ್ಥಳೀಯ ಯುವಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದರು. ಈ ಮಾಹಿತಿಯನ್ನು ತಕ್ಷಣವೇ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಒದಗಿಸಲಾಯಿತು. ಕೂಡಲೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಾಹನದ ವಿವರವನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹಂಚಿಕೊಂಡಿದ್ದು, ಪೊಲೀಸರು ವಾಹನ ಮಾಲಿಕರನ್ನು ಪತ್ತೆಹಚ್ಚಲು ನೆರವಾದರು. ನಂತರ ಕಾನೂನು ಕ್ರಮ ಕೈಗೊಂಡು, ವೇದವ್ಯಾಸ ತಂತ್ರಿ ಅವರಿಗೆ ರೂ.೨೦೦೦ ದಂಡ ವಿಧಿಸಲಾಯಿತು.
ಪಂಚಾಯಿತಿ ಎಚ್ಚರಿಕೆ ಸಂದೇಶ
ಭಕ್ತರು ಹಾಗೂ ಸ್ಥಳೀಯರು ಪ್ಲಾಸ್ಟಿಕ್ ಅಥವಾ ಬೇರೆ ಯಾವುದೇ ರೀತಿಯ ಕಸವನ್ನು ನದಿಗೆ ಬಿಸಾಡುವುದು ತಪ್ಪೇ ತಪ್ಪು. ಇದು ಪರಿಸರ ಮಾಲಿನ್ಯ ಹೆಚ್ಚಿಸುವುದಲ್ಲದೆ, ಪವಿತ್ರ ಕುಮಾರಧಾರ ನದಿಯ ಸ್ವಚ್ಛತೆಯನ್ನು ಹಾಳುಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯರ ಸಹಕಾರದಿಂದ ಇಂತಹ ಘಟನೆಗಳು ಪತ್ತೆಯಾಗುತ್ತಿರುವುದರಿಂದ, ಮುಂದೆ ಯಾರೂ ಕಸ ಬಿಸಾಡುವ ಧೈರ್ಯ ಮಾಡಬಾರದು ಎಂಬ ಎಚ್ಚರಿಕೆ ನೀಡಲಾಗಿದೆ.
























