ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜು.6ರಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಭಕ್ತರಿಗೆ ತಪ್ತ ಮುದ್ರಾಧಾರಣೆ ನಡೆಯಿತು.
ಈ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಭಕ್ತರು ತಪ್ತ ಮುದ್ರಾಧಾರಣೆ ಹಾಕಿಸಿಕೊಂಡರು. ಮುದ್ರಾಧಾರಣೆಯ ಬಗ್ಗೆ ಮಾತನಾಡಿದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ವೃತ್ತಾಸುರನು ದೇವತೆಗಳನ್ನು ಸೋಲಿಸಿದಾಗ ಒಂದಾದ ದೇವತೆಯರು ಶ್ರೀ ಮಹಾವಿಷ್ಣುವಿಗೆ ಶರಣಾಗಿ ಅಸುರನ ಸಂಹಾರಕ್ಕೆ ಹೋಗುತ್ತಾರೆ. ಆಗ ಶ್ರೀ ಮಹಾವಿಷ್ಣು ದೇವತೆಗಳಿಗೆ ವೈಷ್ಣವ ಚಿಹ್ನೆಯಾದ ಶಂಖ, ಚಕ್ರ ಚಿಹ್ನೆಯನ್ನು ಧಾರಣೆ ಮಾಡಿ ಯುದ್ಧಕ್ಕೆ ಕಳಿಸುತ್ತಾನೆ. ಯುದ್ಧದಲ್ಲಿ ದೇವತೆಗಳು ಜಯಗಳಿಸಿದ್ದರಿಂದಾಗಿ ವೈಷ್ಣವ ಚಿಹ್ನೆ ಧಾರಣೆ ಜಯದ ಸಂಕೇತ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಪತಿ ಬೈಪಡಿತ್ತಾಯ, ಶ್ರೀಧರ ಬೈಪಡಿತ್ತಾಯ, ಅರ್ಚಕ ಸದಾಶಿವ ಹೊಳ್ಳ, ಸಮಿತಿಯ ಪದಾಧಿಕಾರಿಗಳು,ಸದಸ್ಯರು, ವಿಷ್ಣುಮೂರ್ತಿ ಭಜನಾ ಮಂಡಳಿ ಸದಸ್ಯರು ಮತ್ತು ಊರಪರವೂರ ಭಕ್ತರು ಉಪಸ್ಥಿತರಿದ್ದರು.
























