ಬೆಂಗಳೂರು: ಡ್ರಗ್ಸ್ ದಂಧೆಗೆ, ಸೇವನೆಗೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಈಶಾನ್ಯ ವಿಭಾಗ ಪೊಲೀಸರು ರೆಸಾರ್ಟ್, ಹೋಂಸ್ಟೇ, ಹೊಟೇಲ್ ಸೇರಿದಂತೆ ಇನ್ನಿತರ ಪಾರ್ಟಿ ಮಾಡುವ ಸ್ಥಳಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಹೊರವಲಯದಲ್ಲಿರುವ ರೆಸಾರ್ಟ್ಗಳು, ಹೊಟೇಲ್ಗಳು, ಹೋಮ್ಸ್ಟೇಗಳಲ್ಲಿ ಪಾರ್ಟಿಗಾಗಿ ಬುಕ್ ಮಾಡುವ ಕೆಲ ಆಯೋಜಕರು, ಅಲ್ಲಿ ಮಾದಕ ದ್ರವ್ಯಗಳಿಗಾಗಿಯೂ ವ್ಯವಸ್ಥೆ ಮಾಡುತ್ತಾರೆ. ಡ್ರಗ್ಸ್ ಸೇವನೆಯಂತಹ ಸಮಾಜ ಘಾತುಕ ಕೆಲಸಗಳೂ ನಡೆಯುತ್ತಿವೆ. ಈ ಹಿನ್ನೆಲೆ ಪಾರ್ಟಿಗಳಿಗೆ ತಮ್ಮ ಕಟ್ಟಡಗಳು, ಸ್ಥಳಗಳನ್ನು ಬಿಟ್ಟು ಕೊಡುವವರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.
ಹೋಂಸ್ಟೇ ನಡೆಸುವವರು ಪ್ರವಾಸೋದ್ಯಮ ಇಲಾಖೆ, ಪೊಲೀಸರಿಂದ ಅನುಮತಿ ಪಡೆದಿರಬೇಕು. ಬಾಡಿಗೆಗೆ ಪಡೆದುಕೊಂಡವರ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕು ಎಂದು ಸೂಚಿಸಲಾಗಿದೆ. ಜೊತೆಗೆ ಒಂದು ವೇಳೆ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಮಾಲೀಕರ ಮೇಲೆಯೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
























