ಬೆಳ್ತಂಗಡಿ: ಮರದ ಗೆಲ್ಲು ಕಡಿಯುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಹುಣ್ಸೆಕಟ್ಟೆ ಪುಂಡಿಕ್ಕು ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ಪುಂಡಿಕ್ಕು ನಿವಾಸಿ ಚನನ ಗೌಡ (69) ಮೃತಪಟ್ಟವರು.
ಚನನ ಗೌಡರು ಇಂದು ಬೆಳಿಗ್ಗೆ ಮೆಸ್ಕಾಂ ಇಲಾಖೆಯ ಅನುಮತಿ ಪಡೆಯದೇ, ಖಾಸಗಿ ಜಮೀನಿನಲ್ಲಿ ಇರುವ ಮರದ ಗೆಲ್ಲು ಕಡಿಯುವಾಗ, ಗೆಲ್ಲು ಆಕಸ್ಮಿಕವಾಗಿ, ಅಲ್ಲಿಯೇ ರಸ್ತೆಯಲ್ಲಿ ಹಾದು ಹೋಗಿರುವ 11ಕೆವಿ ಕುವೆಟ್ಟು ಫೀಡರ್‌ನ ಹೆಚ್.ಟಿ ಲೈನ್‌ಗೆ ಬಿದ್ದು ಈ ಘಟನೆ ನಡೆದಿದೆ. ಗೆಲ್ಲು ತಂತಿ ಮೇಲೆ ಬಿದ್ದುದರಿಂದ ವಿದ್ಯುತ್ ಶಾಕ್ ತಗಲಿ, ಮರದಿಂದ ಕೆಳಗೆ ಬಿದ್ದಿದ್ದು, ಕೂಡಲೇ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಅಲ್ಲಿಯ ವೈದ್ಯರು ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದು ಕೊಂಡು ಹೋಗಲು ತಿಳಿಸಿದ್ದು, ಅದರಂತೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಅವರು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
























