ಬಾಲಿವುಡ್‌ನ ಹಿರಿಯ ನಟ, ನಿರ್ದೇಶಕ ಮನೋಜ್‌ ಕುಮಾರ್‌ ನಿಧನ

ರಾಷ್ಟ್ರಪ್ರೇಮದ ಚಿತ್ರಗಳಿಂದ ಪ್ರಸಿದ್ಧರಾಗಿದ್ದ ಮನೋಜ್‌ ಕುಮಾರ್‌

ಮುಂಬಯಿ: ಬಾಲಿವುಡ್‌ನ ಹಿರಿಯ ನಟ ಹಾಗೂ ನಿರ್ದೇಶಕ ಮನೋಜ್ ಕುಮಾರ್ ಇಂದು ನಸುಕಿನ ವೇಳೆ ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಹಲವು ಸಮಯದಿಂದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಾ ಇದ್ದರು. ಅವರು ರಾಷ್ಟ್ರಪ್ರೇಮದ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದರು. ಈ ಕಾರಣಕ್ಕೆ ಅವರಿಗೆ ‘ಭಾರತ್ ಕುಮಾರ್’ ಎಂಬ ಹೆಸರು ಇತ್ತು.
ಮನೋಜ್ ಕುಮಾರ್ ಅವರನ್ನು ಕೆಲ ವಾರಗಳ ಹಿಂದೆ ಮುಂಬಯಿಯ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಮುಂಜಾನೆ 3.30ರ ಸುಮಾರಿಗೆ ಅವರು ನಿಧನ ಹೊಂದಿದ್ದಾರೆ.
ಚಿತ್ರರಂಗಕ್ಕೆ ಮನೋಜ್ ಕುಮಾರ್ ಅವರ ಕೊಡುಗೆ ಅಪಾರವಾದದ್ದು. ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಉಪ್ಕಾರ್’ (1967) ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಪದ್ಮಶ್ರೀ (1992) ಹಾಗೂ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್​ (2015) ಪುರಸ್ಕೃತರಾಗಿದ್ದರು. ಮನೋಜ್ ಕುಮಾರ್ ಅವರು ಪಂಜಾಬಿ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ಮೂಲ ಹೆಸರು ಹರಿಕೃಷ್ಣ ಗಿರಿ ಗೋಸ್ವಾಮಿ ಎಂದು. ಅವರು 10ನೇ ವಯಸ್ಸಿಗೆ ಬಂದಾಗ ಇಡೀ ಕುಟುಂಬ ದೆಹಲಿಗೆ ಸ್ಥಳಾಂತರ ಆಯಿತು. 1957ರ ಸಮಯದಲ್ಲಿ ನಟನಾಗಿ ಮನೋಜ್ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರು.
1967ರಲ್ಲಿ ‘ಉಪ್ಕಾರ್’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದರು. ಮೊದಲ ಚಿತ್ರದಲ್ಲೇ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತು. ‘ಕ್ರಾಂತಿ’, ‘ಶೋರ್’, ‘ಕ್ಲರ್ಕ್’, ‘ಜೈ ಹಿಂದ್’ ಹರಿಯಲಿ ಔರ್ ರಾಸ್ತಾ, ವೋ ಕೌನ್ ಥಿ, ಹಿಮಾಲಯ ಕಿ ಗೋದ್‌ ಮೇ, ನೀಲ್‌ರಂಗ್‌ ಖೇತಿ, ಕಮಲ್, ಪತನ್, ಪೂರಬ್ ಔರ್ ಪಶ್ಚಿಮ್‌ ಮುಂತಾದ ಕ್ಲಾಸಿಕ್‌ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದರು. ಕೆಲವು ಸಿನಿಮಾಗಳಿಗೆ ಸಂಕಲನಕಾರರಾಗಿ ದುಡಿದಿದ್ದಾರೆ ಹಾಗೂ ಕೆಲವು ಚಿತ್ರಗಳಿಗೆ ಸಾಹಿತ್ಯವನ್ನು ಅವರು ಬರೆದಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top