ಕಡಬ: ಆಲಂಕಾರು ಕೃಷಿಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕೊನೆಗೂ ಸಹಕಾರ ಭಾರತಿ ವಿರುದ್ಧದ ಬಂಡಾಯ ಎದ್ದ ಇನ್ನೊಂದು ತಂಡ ಜಯಗಳಿಸಿದೆ. ಆದರೂ ಅನರ್ಹ 440 ಮತದಾರರಿಗೆ ಅವಕಾಶಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಅವಕಾಶ ನೀಡಿದಲ್ಲಿ 12 ಸ್ಥಾನದಲ್ಲಿ 8 ಸ್ಥಾನ ಸಹಕಾರ ಭಾರತಿ ಪಾಲಾಗಲಿದೆ.
ಚುನಾವಣೆಗಾಗಿ ಬಂಡಾಯ ಎದ್ದ ರಮೇಶ್ ಉಪ್ಪಂಗಳ ಅವರ ತಂಡ 10 ಸ್ಥಾನಗಳನ್ನು ಗೆದ್ದರೂ, ಒಂದು ವೇಳೆ ಅನರ್ಹ 440 ಮತದಾರರಿಗೆ ಮತದಾನ ಮಾಡಲು ಅವಕಾಶ ನೀಡಿದ್ದೇ ಆದಲ್ಲಿ ಒಟ್ಟು 12 ಸ್ಥಾನಗಳಿದ್ದು, ಅದರಲ್ಲಿ 8 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಬಂಡಾಯ ಎದ್ದ ನಾಲ್ಕು ಅಭ್ಯರ್ಥಿಗಳು ಗೆಲುವು ಸಾಧಿಸಲಷ್ಟೇ ಶಕ್ತರಾಗುತ್ತಾರೆ. ಈ ಮೂಲಕ ಆಡಳಿತ ಮಂಡಳಿ ಸಹಕಾರ ಭಾರತಿ ಪಾಲಾಗಲಿದೆ ಎಂಬುದು ಇಲ್ಲಿರುವ ವಿಚಾರ.
ಚುನಾವಣೆ ಕುರಿತು ಶುಕ್ರವಾರ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಅವರು ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಲ್ಲಿ ಪ್ರಾಮಾಣಿಕ 12 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಆದರೆ ಕೆಲವು ಸ್ವಹಿತಾಸಕ್ತಿ ವ್ಯಕ್ತಿಗಳು ಬೇರೆಯೇ ತಂಡ ಕಟ್ಟಿ 12 ಮಂದಿಯನ್ನೂ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಸಹಕಾರ ಭಾರತಿ ಬೆಂಬಲಿತ 12 ಮಂದಿಯೂ ಜಯ ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದ್ದರು.
























