ಇಂದು ಉಡುಪಿಯಲ್ಲಿ ಮತ್ತೋರ್ವ ನಕ್ಸಲ್‌ ಶರಣಾಗತಿ ಪ್ರಕ್ರಿಯೆ

ಒಂದೂವರೆ ದಶಕದಿಂದ ಆಂಧ್ರದಲ್ಲಿರುವ ನಕ್ಸಲ್‌ ಮಹಿಳೆ ಲಕ್ಷ್ಮೀ ತೊಂಬಟ್ಟು ಶರಣಾಗತಿಗೆ ಸಿದ್ಧತೆ

ಉಡುಪಿ : ಕಳೆದ ಸುಮಾರು ಎರಡು ದಶಕದಿಂದ ನಕ್ಸಲ್‌ ಚಟುವಟಿಕೆಯಿಂದ ದೂರವಾಗಿ ನಾಗರಿಕ ಜೀವನ ನಡೆಸುತ್ತಿದ್ದ ಲಕ್ಷ್ಮೀ ತೊಂಬಟ್ಟು ಇಂದು ಉಡುಪಿಯಲ್ಲಿ ಪೊಲೀಸರಿಗೆ ಶರಣಾಗಲಿದ್ದಾಳೆ. ಮೋಸ್ಟ್ ವಾಂಟೆಡ್ ಆರು ನಕ್ಸಲರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗಿದ್ದರು. ಇದೀಗ ಮತ್ತೋರ್ವ ನಕ್ಸಲ್ ಮಹಿಳೆ ಶರಣಾಗತಿಗೆ ಮುಂದಾಗಿದ್ದಾರೆ. ಇಂದು ಉಡುಪಿ ಎಸ್‌ಪಿ ಕಚೇರಿಯಲ್ಲಿ ಬೆಳಗ್ಗೆ 10.30ಕ್ಕೆ ನಕ್ಸಲ್​ ಮಹಿಳೆ ಲಕ್ಷ್ಮೀ ತೊಂಬಟ್ಟು ಶರಣಾಗುತ್ತಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಸಮೀಪದ ತೊಂಬಟ್ಟು ಗ್ರಾಮದ ನಿವಾಸಿ ಲಕ್ಷ್ಮೀ ತೊಂಬಟ್ಟು, ಪಂಜು ಪೂಜಾರಿ ಮತ್ತು ಅಬ್ಬಕ್ಕ ಪೂಜಾರಿ ದಂಪತಿಯ ಆರು ಮಕ್ಕಳ ಪೈಕಿ ಐದನೆಯವರು. 7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಬಳಿಕ ತನ್ನ ಗ್ರಾಮದ ಸಾಮಾಜಿಕ ಚಳವಳಿ, ರಸ್ತೆ ಸಮಸ್ಯೆ, ಸಾರಾಯಿ ಅಂಗಡಿ ವಿರುದ್ಧ ಹೋರಾಟಗಳಲ್ಲಿ ಭಾಗಿಯಾಗಿದ್ದರು. ನಕ್ಸಲ್ ಗುಂಪಿನಲ್ಲಿ ಹಾಡುಗಾರ್ತಿಯಾಗಿಯೂ ಲಕ್ಷ್ಮೀ ಗುರುತಿಸಿಕೊಂಡಿದ್ದರು. ಶಂಕರನಾರಾಯಣ/ಅಮಾಸೆಬೈಲು ಪೊಲೀಸ್‌ ಠಾಣೆಗಳಲ್ಲಿ ಹಳೆ ಮೂರು ಪ್ರಕರಣಳಿರುವುದು ಹೊರತುಪಡಿಸಿದರೆ ಲಕ್ಷ್ಮೀ ವಿರುದ್ಧ ಬೇರೆಲ್ಲೂ ಕೇಸ್‌ಗಳಿಲ್ಲ.





















































 
 

2006ರ ಮಾರ್ಚ್‌ನಲ್ಲಿ ಕಣ್ಮರೆಯಾಗಿದ್ದ ಲಕ್ಷ್ಮೀ ಕೆಲ ಸಮಯ ಆಂಧ್ರದ ನಕ್ಸಲ್‌ ಚಟುವಟಿಕೆಯಲ್ಲಿ ಸಕ್ರಿಯಳಾಗಿದ್ದಳು. ಬಳಿಕ ಮಾಜಿ ನಕ್ಸಲ್ ಸಂಜೀವ್ ಅಲಿಯಾಸ್ ಸಲೀಂ ಜತೆ ವಿವಾಹವಾಗಿದ್ದು, ನಕ್ಸಲ್​​ ಚಟುವಟಿಕೆ ಬಿಟ್ಟು ಆಂಧ್ರದಲ್ಲಿ ಜೀವನ ನಡೆಸುತ್ತಿದ್ದಾಳೆ. ಲಕ್ಷ್ಮೀ ಪತಿ ಸಂಜೀವ್​ ನಕ್ಸಲ್​​ ಚಟುವಟಿಕೆ ಬಿಟ್ಟು ಮುಖ್ಯವಾಹಿನಿಗೆ ಬಂದಿದ್ದಾನೆ. ಲಕ್ಷ್ಮೀ ತೊಂಬಟ್ಟು ಶರಣಾಗುತ್ತಿರುವ ಬಗ್ಗೆ ಕುಟುಂಬದವರಿಗೆ ಯಾವುದೇ ಮಾಹಿತಿ ಇಲ್ಲ. ಕಳೆದ ಒಂದೂವರೆ ದಶಕದಿಂದ ಲಕ್ಷ್ಮೀ ಮನೆಗೆ ಬಂದಿಲ್ಲ. ಆಂಧ್ರ ಪ್ರದೇಶದಲ್ಲಿ ಲಕ್ಷ್ಮೀಯ ಪತಿ ಶರಣಾಗತಿ ಆಗಿ ಎಲ್ಲ ಪ್ರಕರಣಗಳಿಂದ ಖುಲಾಸೆಗೊಂಡು ಮುಖ್ಯವಾಹಿನಿಯಲ್ಲಿದ್ದಾನೆ. ಲಕ್ಷ್ಮೀ ಫೋನ್ ಸಂಪರ್ಕದ ಮೂಲಕ ಅಣ್ಣ ಹಾಗೂ ಅಕ್ಕನ ಜೊತೆ ಸಂಪರ್ಕದಲ್ಲಿದ್ದಳು. ಅಣ್ಣ ವಿಠಲ ಪೂಜಾರಿ ಮತ್ತು ಸಹೋದರಿ ರಾಜೀವಿ ಕೂಲಿ ಕೆಲಸ ಮಾಡುತ್ತಿದ್ದಾರೆ. ತಂದೆ, ತಾಯಿ ತೀರಿಕೊಂಡಾಗಲೂ ಲಕ್ಷ್ಮೀ ಬಂದಿರಲಿಲ್ಲ. ಮನೆಯ ಶುಭಕಾರ್ಯ ಹಾಗೂ ಸಾವಿನ ವೇಳೆ ಅಲರ್ಟ್ ಆಗಿದ್ದ ಪೊಲೀಸರು, ಲಕ್ಷ್ಮೀ ಮನೆಗೆ ಬರಬಹುದು ಎಂದು ಕಾದಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top