ಅಯೋಧ್ಯೆ, ಕಾಶಿಗೆ ಭೇಟಿ ನೀಡುವವರ ಸಂಖ್ಯೆ ಏರಿಕೆ
ಪ್ರಯಾಗ್ರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಇಷ್ಟರತನಕ 30 ಕೋಟಿಗೂ ಅಧಿಕ ಮಂದಿ ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಸರಕಾರ ಮಾಹಿತಿ ನೀಡಿದೆ.
ಜಗತ್ತಿನ ಎಲ್ಲೆಡೆಯಿಂದ ಜನರು ಕುಂಭಮೇಳ ನೋಡಲು ಮತ್ತು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಆಗಮಿಸುತ್ತಿದ್ದಾರೆ. ಶನಿವಾರ 77 ದೇಶಗಳ ರಾಜತಾಂತ್ರಿಕರು ಪುಣ್ಯಸ್ನಾನ ಮಾಡಿದ್ದಾರೆ ಎಂದು ತಿಳಿಸಿದೆ.
ಕುಂಭಮೇಳದಲ್ಲಿ ಈವರೆಗೂ 30 ಕೋಟಿಗೂ ಅಧಿಕ ಭಕ್ತರು ಪವಿತ್ರಸ್ನಾನ ಮಾಡಿದ್ದಾರೆ. ಕಾಲ್ತುಳಿತ ಸಂಭವಿಸಿದ ಮೌನಿ ಅಮವಾಸ್ಯೆಯ ಒಂದೇ ದಿನ ಸುಮಾರು 8 ಕೋಟಿ ಜನರು ಕುಂಭಮೇಳದಲ್ಲಿದ್ದರು. ಜ.13ರಂದು ಮಹಾಕುಂಭಮೇಳ ಶುರುವಾದಂದಿನಿಂದ ಸಾಗರೋಪಾದಿಯಲ್ಲಿ ಜನರು ಆಗಮಿಸುತ್ತಿದ್ದಾರೆ. ಉತ್ತರ ಪ್ರದೇಶದ ಮೂಲೆಮೂಲೆಗಳಿಂದ ಕುಂಭಮೇಳಕ್ಕಾಗಿ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಅಂತೇಯೇ ದೇಶದೆಲ್ಲೆಡೆಯಿಂದ ವಿಶೇಷ ವಿಮಾನ, ರೈಲುಗಳ ವ್ಯವಸ್ಥೆಯಿರುವುದರಿಂದ ಜನರು ಬರುತ್ತಿದ್ದಾರೆ. ಒಟ್ಟಾರೆ ಸುಮಾರು 45 ಕೋಟಿ ಜನರು ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಉತ್ತರ ಪ್ರದೇಶ ಸರಕಾರ ಹೇಳಿಕೊಂಡಿದೆ.
ಈ 19 ದಿನದಲ್ಲಿ ಒಂದು ಲಕ್ಷ ಮಂದಿ 650ಕ್ಕೂ ಹೆಚ್ಚು ವಿಮಾನಗಳಲ್ಲಿ ಪ್ರಯಾಗ್ರಾಜ್ಗೆ ಬಂದು ಹೋಗಿದ್ದಾರೆ. ಕುಂಭಮೇಳದಿಂದಾಗಿ ಅಯೋಧ್ಯೆ, ಕಾಶಿ ಮತ್ತಿತರ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಅಯೋಧ್ಯೆಗೆ 10 ದಿನದಲ್ಲಿ 70 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದಾರೆ. ನಿತ್ಯ ಸರಾಸರಿ 7 ಲಕ್ಷ ಮಂದಿ ಬಾಲರಾಮನ ದರ್ಶನ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

























