ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಬಲಿಗರ ವಿರುದ್ಧ ದೂರು
ಮಂಗಳೂರು: ರಾಮ ಸೇನೆಯ ಸ್ಥಾಪಕ ಪ್ರಸಾದ್ ಅತ್ತಾವರ ಮುಡಾ ಕೇಸಿನ ದೂರುದಾರ ಸ್ನೇಹಮಯಿ ಕೃಷ್ಣ ಅವರ ಹೋರಾಟಕ್ಕೆ ಬಲ ತುಂಬಲು ಪ್ರಾಣಿಬಲಿ ಕೊಟ್ಟು ರಕ್ತಾಭಿಷೇಕ ಮಾಡಿಸಿದ್ದಾರೆ ಎಂಬ ಆರೋಪಕ್ಕೆ ಈಗ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಈಗ ಸ್ವತಹ ಸ್ನೇಹಮಯಿ ಕೃಷ್ಣ ಅವರೇ ನನ್ನ ಮೇಲೆ ವಾಮಾಚಾರ ಹಾಗೂ ವಶೀಕರಣ ಪ್ರಯೋಗ ನಡೆಯುತ್ತಿದೆ ಎಂದು ಆರೋಪಿಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದಾರೆ.
ಮಂಗಳೂರಿನಲ್ಲಿ ಇತ್ತೀಚೆಗೆ ಬಂಧನಕ್ಕೊಳಗಾದ ಪ್ರಸಾದ್ ಅತ್ತಾವರ ಎಂಬವರ ಫೋನ್ ಪರಿಶೀಲಿಸಿದಾಗ ನನ್ನ ಮತ್ತು ಗಂಗರಾಜು ಫೋಟೊ ಇಟ್ಟು ಪ್ರಾಣಿಗಳ ಬಲಿಕೊಟ್ಟು ವಾಮಾಚಾರ ಮಾಡಿರುವುದು ಕಂಡುಬಂದಿದೆ. ಇದರ ಜೊತೆ ನನ್ನನ್ನು ಭೇಟಿ ಮಾಡಿ ಆಮಿಷವೊಡ್ಡಿದ್ದ ಹರ್ಷ ಮತ್ತು ಶ್ರೀನಿಧಿ ಅವರ ಹೆಸರನ್ನು ಚೀಟಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೆಲ್ಲ ನೋಡಿದಾಗ ಏನೋ ದೊಡ್ಡ ಸಂಚು ರೂಪಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ನನ್ನ ಹಾಗೂ ಗಂಗರಾಜು ಅವರ ಫೋಟೊ ಇಟ್ಟು ಡಿ.9ರಂದು ಆ ಪೂಜೆಗಳನ್ನು ನಡೆಸಲಾಗಿದೆ. ಡಿ.13ರಂದು ಹರ್ಷ ಮತ್ತು ಶ್ರೀನಿಧಿ ಎಂಬವರು ನನ್ನನ್ನು ಭೇಟಿ ಮಾಡಿ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಬೇಕು ಎಂದು ಸಲ್ಲಿಸಿರುವ ಅರ್ಜಿಯನ್ನು ದಯವಿಟ್ಟು ವಾಪಸ್ ತೆಗೆದುಕೊಳ್ಳಿ. ನಿಮಗೆ ಎಷ್ಟು ದುಡ್ಡು ಬೇಕೋ ಅಷ್ಟು ಕೊಡುತ್ತೇವೆ ಎಂದು ಹೇಳಿದ್ದರು.
ಇದರ ಜೊತೆಗೆ ನನ್ನ ಮಗನ ಜೊತೆ ಮಾತನಾಡಿ, ನಮ್ಮ ಬಾಸ್ ಮಂಗಳೂರಿನಲ್ಲಿದ್ದಾರೆ ಎಂದು ಅತ್ತಾವರ ಅವರ ಫೋಟೊ ತೋರಿಸಿ, ಇವರು ಹೇಗೆ ಹೇಳುತ್ತಾರೋ ಹಾಗೆ ನಾವು ಕೇಳುತ್ತೇವೆ. ಅವರೇ ನೀವು ಹೋಗಿ ಕೆಲಸ ಆಗುತ್ತದೆ ಎಂದು ಹೇಳಿ ಕಳುಹಿಸಿದ್ದರು ಎಂದು ಹೇಳಿದ್ದರು. ಇದರಲ್ಲಿ ಸಾಕಷ್ಟು ಅನುಮಾನಾಸ್ಪದ ಸಂಗತಿಗಳು ಕಂಡು ಬಂದಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಇದರ ಹಿಂದೆ ಯಾರಿದ್ದಾರೆ, ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ. ಘಟನೆ ಸಂಬಂಧ ಈಗಾಗಲೇ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ನನ್ನ ಬಳಿ ಇರುವ ಸಾಕ್ಷಿಗಳನ್ನು ಪೊಲೀಸರಿಗೆ ನೀಡುತ್ತೇನೆಂದು ತಿಳಿಸಿದ್ದಾರೆ.
ಜ.23ರಂದು ಮಂಗಳೂರಿನ ಕಲರ್ಸ್ ಯೂನಿಸೆಕ್ಸ್ ಸಲೂನ್ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ಆರೋಪಿ ಪ್ರಸಾದ್ ಅತ್ತಾವರ ಜೊತೆ ಒಟ್ಟು 13 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಸಾದ್ ಅತ್ತಾವರ ಮೊಬೈಲ್ ಫೋನ್ ಪರಿಶೀಲಿಸಿದಾಗ, ಅನಂತ್ ಭಟ್ ಎಂಬ ವ್ಯಕ್ತಿಯ ಜೊತೆ ವಾಮಾಚಾರದ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಚರ್ಚಿಸಿರುವ ಅನೇಕ ಸಂದೇಶಗಳು, ಚಿತ್ರಗಳು, ವಿಡಿಯೊಗಳು ದೊರೆತಿದ್ದವು. ದೇವಸ್ಥಾನವೊಂದರಲ್ಲಿ ಐದು ಕುರಿಗಳನ್ನು ಬಲಿ ಕೊಟ್ಟು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಅವರ ಫೋಟೊ ಹಾಗೂ ಇವರಿಬ್ಬರ ಹೆಸರಿನ ಜೊತೆಗೆ ಪ್ರಸಾದ್ ಅತ್ತಾವರ, ಹರ್ಷ, ಶ್ರೀನಿಧಿ, ಸುಮ ಆಚಾರ್ಯ ಸೇರಿ ಒಟ್ಟು ಐವರ ಹೆಸರು ಬರೆದಿರುವ ಪೇಪರ್ ಅನ್ನು ದೇವಿಯ ಮೇಲೆ ಇಟ್ಟು ಅದಕ್ಕೆ ರಕ್ತದ ಅಭಿಷೇಕ ಮಾಡಲಾಗಿದೆ. ಅನಂತ್ ಭಟ್ ಮತ್ತು ಪ್ರಸಾದ್ ನಡುವೆ ವಿನಿಮಯ ಆಗಿರುವ ಸಂದೇಶದ ನೋಡಿದರೆ, ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರಿಗೆ ಬಲ ಸಿಗಲೆಂದು ಈ ರೀತಿ ಮಾಡಿರಬಹುದು ಅನ್ನಿಸುತ್ತದೆ. ಅನಂತ್ ಭಟ್ ಯಾರು, ಬಲಿ ನಡೆದಿರುವ ಸ್ಥಳ ಯಾವುದು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
























