ಪುತ್ತೂರು: ಯಾವುದೇ ವಿಚಾರದಲ್ಲಿ ಆಸಕ್ತಿ ಬಂದಾಗ ಮಾತ್ರ ಅದರ ಮೌಲ್ಯ ತಿಳಿದುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಡಾ. ಶಿವರಾಮ ಕಾರಂತರ ವಿಚಾರಧಾರೆಗಳು ಮೌಲ್ಯಯುತವಾಗಿದ್ದು, ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡುವ ಮೂಲಕ ವಿಶ್ವಮಾನ್ಯರಾಗಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪರ್ಲಡ್ಕ ಡಾ.ಶಿವರಾಮ ಕಾರಂತರ ಬಾಲವನ ಹಾಗೂ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಸಂಯುಕ್ತ ಆಶ್ರಯದಲ್ಲಿ ಪರ್ಲಡ್ಕ ಡಾ.ಶಿವರಾಮ ಕಾರಂತ ಬಾಲವನದಲ್ಲಿ ಮಂಗಳವಾರ ನಡೆದ ಡಾ.ಶಿವರಾಮ ಕಾರಂತರ 122ನೇ ಜನ್ಮದಿನೋತ್ಸವ, ಬಾಲವನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಕಾರಂತರ ವಿಚಾರಧಾರೆಗಳಿಗೆ ಪೂರಕವಾಗಿ ಬಾಲವನ ಬೆಳೆಯಬೇಕು. ಅದನ್ನು ಕಾರಂತರ ಕುರಿತು ತಿಳಿದುಕೊಂಡಿರುವವರ ಜತೆಗೂಡಿ ಸರಕಾರದ ಅನುದಾನದಿಂದ ಅಭಿವೃದ್ಧಿ ಪಡಿಸೋಣ ಎಂದರು.

ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್ ಅವರು ಕಾರಂತರ ಸ್ಮರಣೆ ಮಾಡಿ, ಕಾರಂತರೆಂದರೆ ಕಡಲು, ಪರ್ವತ, ಪ್ರವಾಹ ಇದ್ದ ಹಾಗೆ. ಈ ಕಾರಣಕ್ಕಾಗಿಯೇ ಅವರ ಪ್ರತಿಬಿಂಬವನ್ನು ಕಾಲಮಿತಿಯೊಳಗೆ ಹಿಡಿದಿಡುವುದು ಕಷ್ಟಸಾಧ್ಯ. ಅವರು ವೈಚಾರಿಕ, ವಾಸ್ತವ ನೆಲೆಯಿಂದ ಕೃತಿಗಳನ್ನು ರಚನೆ ಮಾಡುತ್ತಿದ್ದರು ಎಂದ ಅವರು, ಯಕ್ಷಗಾನವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಅವರ ಕೊಡುಗೆ ಮಹತ್ವದ್ದು. ಹತ್ತು ಹಲವು ನೆಲೆಗಳಲ್ಲಿ ರಚಿಸಲ್ಪಟ್ಟ ಕಾರಂತರ ಕೃತಿಗಳು ಮುಂದಿನ ಬೆಳವಣಿಗೆಗಳ ಅಧ್ಯಯನಕ್ಕೆ ದಾರಿಮಾಡಿ ಕೊಟ್ಟಿವೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವರ್ಣಚಿತ್ರ ಕಲಾವಿದ ಕೆ.ಚಂದ್ರನಾಥ ಆಚಾರ್ಯ ಅವರಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆ, 25 ಸಾವಿರ ರೂ. ಚೆಕ್ ನೊಂದಿಗೆ ಡಾ.ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರಂತರ ಒಡನಾಡಿ ಪಡಾರು ಮಹಾಬಲೇಶ್ವರ ಭಟ್ ಮಂಚಿ ಅವರನ್ನು ಗೌರವಿಸಲಾಯಿತು.
ಬೆಟ್ಟಂಪಾಡಿ ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅವರು ಪ್ರಶಸ್ತಿ ಪುರಸ್ಕೃತ ಚಂದ್ರನಾಥ ಆಚಾರ್ಯರ ಕುರಿತು ಅಭಿನಂದನಾ ಮಾತುಗಳನ್ನಾಡಿ, ಕಲೆಯ ಬಗ್ಗೆ ಆಳವಾದ ಅಧ್ಯಯನ ಮಾಡಿದವರು ಚಂದ್ರನಾಥ ಆಚಾರ್ಯರು. ಪುತ್ತೂರಿನಲ್ಲಿ ಹುಟ್ಟಿರುವ ಅವರು ಪುತ್ತೂರಿನ ಸೆಳೆತವನ್ನು ಇಂದಿಗೂ ಬಿಟ್ಟವರಲ್ಲ. ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ ವಿಶೇಷವಾಗಿ ಕಲೆಗಾರಿಕೆಗೆ ಜೀವ ತುಂಬುವ ಕೆಲಸ ಆಗಬೇಕಾಗಿದೆ ಎಂದರು.
ವೇದಿಕೆಯಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ, ತಹಶೀಲ್ದಾರ್ ಜೆ. ಶಿವಶಂಕರ್, ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ಕಸಾಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಉಪಸ್ಥಿತರಿದ್ದರು. ಶಾಲಿನಿ ಶೆಟ್ಟಿ ಮತ್ತು ಬಳಗ ಪ್ರಾರ್ಥಿಸಿದರು. ಸಹಾಯಕ ಆಯುಕ್ತ ಗಿರೀಶ್ ನಂದನ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ವಂದಿಸಿದರು. ಡಾ.ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು. ಸಂಜಯನಗರ ಶಾಲಾ ಮುಖ್ಯಶಿಕ್ಷಕ ರಮೇಶ್ ಉಳಯ, ಚಿತ್ರಕಲಾ ಶಿಕ್ಷಕ ಜಗನ್ನಾಥ ಅರಿಯಡ್ಕ ಸಹಕರಿಸಿದರು.
ಸಭಾ ಕಾರ್ಯಕ್ರಮದ ಮೊದಲು ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ವತಿಯಿಂದ ವಿದ್ವಾನ್ ದೀಪಕ್ ಕುಮಾರ್ ನಿರ್ದೇಶನದಲ್ಲಿ ನೃತ್ಯರೂಪಕ ಪ್ರದರ್ಶನಗೊಂಡಿತು.
























