ಪುತ್ತೂರಿನ ಹೆಸರನ್ನು ನ್ಯೂಸ್ ಪುತ್ತೂರು ಹತ್ತೂರಿಗೆ ಪಸರಿಸಲಿ: ಶಾಸಕ ಅಶೋಕ್ ರೈ
ಪುತ್ತೂರು ಬೆಳೆಯುತ್ತಿರುವ ನಗರ. ಒಂದಷ್ಟು ಉದ್ಯಮಗಳು ಬರುತ್ತಿವೆ. ಜನಸಂಖ್ಯೆ ಹೆಚ್ಚಾಗ್ತಾ ಇದೆ. ಪುತ್ತೂರಿಗೆ ಎಲ್ಲಾ ಉದ್ಯಮಗಳು ಬರಬೇಕು ಎನ್ನುವ ಆಶೆ ನಮ್ಮದು. ಇದರೊಂದಿಗೆ ಉತ್ತಮ ವಿಚಾರ ಎಂಬಂತೆ ನ್ಯೂಸ್ ಪುತ್ತೂರು ಎನ್ನುವ ಮಾಧ್ಯಮ ಪುತ್ತೂರಿಗೆ ಪರಿಚಯಗೊಂಡಿದೆ. ಎಲ್ಲಿ ಹೋದರೂ ಭ್ರಷ್ಟಾಚಾರ ಎದ್ದು ಕಾಣುವ ಇಂದಿನ ದಿನದಲ್ಲಿ, ಬಡವರಿಗೆ ನ್ಯಾಯ ಸಿಗುವ ಕೆಲಸ ಆಗಬೇಕು. ಮಾಧ್ಯಮದ ಮೂಲಕ ಬಡವರಿಗೆ ಆಗುತ್ತಿರುವ ಅನ್ಯಾಯವನ್ನು ಎತ್ತಿ ತೋರಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನ್ಯೂಸ್ ಪುತ್ತೂರು ಕೆಲಸ ಮಾಡಲಿ ಎಂದು ಶುಭಹಾರೈಸುತ್ತೇನೆ. ಪುತ್ತೂರಿನ ಅಭಿವೃದ್ಧಿ ಕೆಲಸದಲ್ಲಿ ಒಂದು ಅಂಗವಾಗಿ ನ್ಯೂಸ್ ಪುತ್ತೂರು ಕೆಲಸ ಮಾಡಲಿ. ಜನರಿಗೆ ಸಮಾಜಿಕ ನ್ಯಾಯ ನೀಡುವಂತಾಗಲಿ. ಪುತ್ತೂರಿನ ಹೆಸರನ್ನು ಹತ್ತೂರಲ್ಲಿ ಪಸರಿಸುವಂತಾಗಲಿ. ರಾಜ್ಯಕ್ಕೆ ಹೆಸರುವಾಸಿಯಾಗಲಿ.
- ಅಶೋಕ್ ಕುಮಾರ್ ರೈ, ಶಾಸಕರು

ಪುತ್ತೂರು: ಸಮಾಜವನ್ನು ಸುಶಿಕ್ಷತೆಯೆಡೆಗೆ ಕೊಂಡೊಯ್ಯುವ ಜವಾಬ್ದಾರಿ ಮಾಧ್ಯಮಗಳಿಗಿದೆ. ಇಂತಹ ಜವಾಬ್ದಾರಿಯನ್ನು ನ್ಯೂಸ್ ಪುತ್ತೂರು ಸಮರ್ಥವಾಗಿ ನಿರ್ವಹಿಸುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಜನಮನದ ಪ್ರತಿಧ್ವನಿಯಂತೆ ಕೆಲಸ ನಿರ್ವಹಿಸುತ್ತಿರುವ ನ್ಯೂಸ್ ಪುತ್ತೂರು ಇದರ ನೂತನ ಕಚೇರಿಯನ್ನು ಪುತ್ತೂರು ಏಳ್ಮುಡಿಯಲ್ಲಿರುವ ಪ್ರಾವಿಡೆನ್ಸ್ ಪ್ಲಾಝಾದ 3ನೇ ಮಹಡಿಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ಪರಿಪೂರ್ಣವಾಗಬೇಕಾದರೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ‍್ಯಮ ರಂಗ ತೀರಾ ಅಗತ್ಯ. ಮುದ್ರಣ ಮಾಧ್ಯಮಗಳ ಕಾರ್ಯಾಚರಣೆಯ ಜೊತೆಜೊತೆಗೆ ಇದೀಗ ಸೋಶಿಯಲ್ ಮೀಡಿಯಾಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಈ ಎರಡೂ ರೀತಿಯ ಮಾಧ್ಯಮಗಳು ಸಮಾಜದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ. ಇದರೊಂದಿಗೆ ಸಮಾಜದ ಅಂಕು- ಡೊಂಕುಗಳನ್ನು ತಿದ್ದುವ ಕೆಲಸವನ್ನು ಮಾಧ್ಯಮಗಳು ನಿರ್ವಹಿಸುತ್ತಿದೆ. ಈ ಕೆಲಸ ಇನ್ನಷ್ಟು ವೇಗ ಪಡೆದುಕೊಳ್ಳಲಿ ಎಂದು ಕಿವಿಮಾತು ಹೇಳಿದರು.
ಪ್ರೇರಣಾ ಮಕ್ಕಳ ಭವಿಷ್ಯಕ್ಕೆ ಪ್ರೇರಣೆ:
ಪ್ರೇರಣಾ ಸಂಸ್ಥೆ ಮಕ್ಕಳ ಭವಿಷ್ಯಕ್ಕೆ ಪ್ರೇರಣೆ ನೀಡುವ ಕೆಲಸದಲ್ಲಿ ನಿರತವಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಾವು ಹೇಗೆ ತಯಾರಾಗಬೇಕು, ಹೇಗೆ ಉತ್ತೀರ್ಣರಾಗಬೇಕು ಎಂಬ ಕುರಿತು ತರಬೇತಿ ನೀಡುವ ಮೂಲಕ ಮುಂದೇನು ಎಂಬ ಪ್ರಶ್ನಾರ್ಥಕ ಚಿಹ್ನೆಗೆ ಉತ್ತರ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಸಂಜೀವ ಮಠಂದೂರು ಹೇಳಿದರು.
ನ್ಯೂಸ್ ಪುತ್ತೂರು ಲೋಗೋ ಅನಾವರಣ ಮಾಡಿದ ಅರುಣ್ ಕುಮಾರ್ ಪುತ್ತಿಲ

ನ್ಯೂಸ್ ಪುತ್ತೂರಿನ ಲೋಗೋ ಅನಾವರಣ ಲೋಕಾರ್ಪಣೆ ಮಾಡಿ ಮಾತನಾಡಿದ ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಪುತ್ತೂರಿನ ಬೆಳವಣಿಗೆಯಲ್ಲಿ ಮಾಧ್ಯಮ ಲೋಕದ ಅಗತ್ಯ ತುಂಬಾ ಇದೆ. ಪುತ್ತೂರಿನ ಸಮಗ್ರ ಅಭಿವೃದ್ಧಿಯ ದಿಶೆಯಲ್ಲಿ ಕೆಲಸ ಮಾಡುವ ಜೊತೆಗೆ, ಉತ್ತಮ ಸಂದೇಶವನ್ನು ನೀಡುವ ಕೆಲಸವನ್ನು ನ್ಯೂಸ್ ಪುತ್ತೂರು ಮಾಡಲಿ. ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸಿದರು.
ಉತ್ತಮ ಕೆಲಸಕ್ಕೆ ನ್ಯೂಸ್ ಪುತ್ತೂರು ನಾಂದಿಯಾಗಲಿ: ಜಯಂತ ನಡುಬೈಲು
ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡುವ ಸ್ಕಾಲರ್ ಶಿಪ್ ವಿತರಣೆ ಮಾಡಿ ಮಾತನಾಡಿದ ಸಂಪ್ಯ ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲು, ಮಾಹಿತಿಯ ಕೊರತೆ ಇರುವ ಗ್ರಾಮೀಣ ಭಾಗದ ಮಕ್ಕಳಿಗೆ ಮಾಹಿತಿ ನೀಡುವ ಕೆಲಸವನ್ನು ಪ್ರೇರಣಾ ಮಾಡುತ್ತಿದೆ. ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಮಾಡುವ ಸಂಸ್ಥೆ ಆಗಬೇಕು ಎನ್ನುವ ಸದುದ್ದೇಶದ ಪ್ರೇರಣಾ ಸಂಸ್ಥೆಯ ಕಾರ್ಯವೈಖರಿ ಶ್ಲಾಘನೀಯ ಎಂದರು.
ಸಮಾಜದ ಬದಲಾವಣೆ ಮಾಧ್ಯಮಗಳಿಂದ ಮಾತ್ರ ಸಾಧ್ಯ. ಇಂತಹ ಕಾಯಕದಲ್ಲಿ ನ್ಯೂಸ್ ಪುತ್ತೂರು ತೊಡಗಿಸಿಕೊಂಡಿದ್ದು, ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡುವಂತಾಗಲಿ. ಸಾಧಕರ ಬಳಿಗೆ ತೆರಳಿ ಅವರ ಸಾಧನೆಯನ್ನು ಜನಮಾನಸಕ್ಕೆ ತಿಳಿಸುವ ಕೆಲಸವನ್ನು ಮಾಡಬೇಕೆಂಬ ಸದುದ್ದೇಶ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ನ್ಯೂಸ್ ಪುತ್ತೂರು ಎಲ್ಲರಿಗೂ ಪ್ರೇರಣೆಯಾಗಲಿ: ತಿಲಕ್ ರೈ ಕುತ್ಯಾಡಿ
ಪುತ್ತೂರು ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಮಾತನಾಡಿ, ನ್ಯೂಸ್ ಪುತ್ತೂರು ಮತ್ತು ಪ್ರೇರಣಾ ಸಂಸ್ಥೆ ಪುತ್ತೂರಿಗೆ ಮಾತ್ರವಲ್ಲದೆ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವ ಮೂಲಕ ನಮ್ಮೆಲ್ಲರಿಗೆ ಪ್ರೇರಣೆಯಾಗಲಿ. ನೇರ, ದಿಟ್ಟ, ನಿರಂತರ ವರದಿಗಳನ್ನು ಬಿತ್ತರಿಸುವ ಮೂಲಕ ಸಮಾಜದಲ್ಲಿ ಉತ್ತಮ ಕೆಲಸ ಮಾಡಲಿ ಎಂದು ಶುಭಹಾರೈಸಿದರು.
ಪುತ್ತೂರಿನ ಇತಿಹಾಸದಲ್ಲಿ ಹೊಸ ಅಧ್ಯಾಯ : ರಾಮದಾಸ್ ಶೆಟ್ಟಿ
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಅಧ್ಯಕ್ಷ ರಾಮದಾಸ್ ಶೆಟ್ಟಿ ಮಾತನಾಡಿ, ಉತ್ತಮ ದೃಷ್ಟಿಕೋನವನ್ನಿಟ್ಟುಕೊಂಡು ನ್ಯೂಸ್ ಪುತ್ತೂರು ಹಾಗೂ ಪ್ರೇರಣಾ ಸಂಸ್ಥೆ ಕಾರ್ಯಾಚರಿಸುತ್ತಿದೆ. ಇದು ಪುತ್ತೂರಿನ ಇತಿಹಾಸದಲ್ಲಿ ಹೊಸ ಅಧ‍್ಯಾಯ. ಈ ಎರಡೂ ಸಂಸ್ಥೆಗಳು ಹೆಮ್ಮರವಾಗಿ ಬೆಳೆದು, ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉತ್ತಮ ಕೆಲಸ ಮಾಡಲಿ ಎಂದು ಆಶಿಸಿದರು.
60 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ:
ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಮಾರು 60 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಪ್ರೇರಣಾ ಸಂಸ್ಥೆಯ ಸಿ.ಎ. ಫೌಂಡೇಶನ್’ನಲ್ಲಿ ತರಬೇತಿ ಪಡೆದುಕೊಂಡು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾದ ಸಿಮ್ರಾನ್ ತಾಜ್ ಹಾಗೂ ಸ್ಮಿತಾ ಎಸ್. ರೈ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಉಪಾಧ್ಯಕ್ಷ ಹರೀಶ್ ಉಬರಡ್ಕ, ಪ್ರಧಾನ ಕಾರ್ಯದರ್ಶಿ ಮುರಳೀಧರ ಕೆ.ಎನ್., ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ಯತೀಶ್ ಎಸ್., ಪ್ರಸಾದ್ ಕೆ.ಎನ್., ಚಿದಾನಂದ ಬೈಲಾಡಿ, ವೆಂಕಟೇಶ್ ಭಟ್ ಕೊಯಕ್ಕುಡೆ, ಸತೀಶ್ ಪಾಂಬಾರು, ವಸಂತ ಎಸ್. ವೀರಮಂಗಲ, ಸುಶಾಂತ್ ಕೆಡೆಂಜಿ ಉಪಸ್ಥಿತರಿದ್ದರು.
ನಿರ್ದೇಶಕರಾದ ನಾಗೇಶ್ ಕೆಡೆಂಜಿ ಅವರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಕುರಿತು ಮಾತನಾಡಿದರು.
ದಯಾಮಣಿ, ಮೋಕ್ಷಿತಾ, ಮಧು ಮುರಳಿ, ಮಮತಾ ವಸಂತ್ ಪ್ರಾರ್ಥಿಸಿದರು. ನಿರ್ದೇಶಕರಾದ ಚಿದಾನಂದ ಬೈಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು ನ್ಯೂಸ್ ಪುತ್ತೂರು ಅಧ್ಯಕ್ಷರಾದ ಕೇಶವ ಅಮೈ ಕಲಾಯಿಗುತ್ತು ಸ್ವಾಗತಿಸಿದರು. ನಿರ್ದೇಶಕ ವಸಂತ ಎಸ್. ವೀರಮಂಗಲ ವಂದಿಸಿದರು. ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕರಾದ ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು.
























